ಬರೋಬ್ಬರಿ ಎಂಟು ವರ್ಷಗಳ ನಂತರ ಉಪೇಂದ್ರ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಈಗಾಗಲೇ ‘ಯುಐ’ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಸಿರುವ ರಿಯಲ್ ಸ್ಟಾರ್, ಸದ್ಯ ಎಡಿಟಿಂಗ್ (Editing)ಟೇಬಲ್ ಮುಂದೆ ಕೂತು, ಕನಸನ್ನು ಹೊಲೆಯುತ್ತಿದ್ದಾರೆ. ಎಡಿಟಿಂಗ್ ಕೆಲಸ ಮುಗಿಯುತ್ತಿದ್ದಂತೆಯೇ ಮತ್ತ್ಯಾವ ಅಪ್ ಡೇಟ್ ಕೊಡ್ತಾರೋ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಉಪ್ಪಿಇದೊಂದು ಹೆಸರು ಕನ್ನಡಿಗರಿಗೆ ಮಾತ್ರ ಅಲ್ಲ, ದಕ್ಷಿಣ ಭಾರತದ ಜನರಲ್ಲಿ ಕಿಚ್ಚು ಮೂಡಿಸುತ್ತದೆ. ಹುಚ್ಚು ಹಿಡಿಸುತ್ತದೆ. ಅದರಲ್ಲೂ ಇವರೇ ನಿರ್ದೇಶಕ ಅದರಂತೂ ಕೇಳಬೇಕೆ? ಇಲ್ಲಿವರೆಗೆ ಉಪ್ಪಿ ನಿರ್ದೇಶನ ಮಾಡಿದ ಸಿನಿಮಾಗಳದ್ದು ಒಂದು ತೂಕವಾದರೆ, ಈ ಯುಐ ಇದೆಯಲ್ಲ ಅದು ಭೂಮಿ ತೂಕ. ಭರ್ತಿ ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಹಲವಾರು ಗ್ರೇಟ್ ಸ್ಪೆಶಾಲಿಟಿಗಳಿವೆ. ಭಾರತದಲ್ಲೇ ಮೊದಲ ಬಾರಿ ಎನ್ನುವಂಥ ವಿಷಯ ಹಾಗೂ ತಾಂತ್ರಿಕ ಕೆಲಸಗಳಿವೆ. ಅದಕ್ಕಾಗಿಯೇ ಬೆಂಗಳೂರು ಸಮೀಪ ಹತ್ತು ಎಕರೆ ಜಾಗದಲ್ಲಿ ಹಿಂದೆಂದೂ ಕಾಣದಂಥ ಸೆಟ್ ಹಾಕಲಾಗಿದೆ.
ಅದ್ಭುತ ತಂಡವನ್ನು ಕಟ್ಟಿಕೊಂಡು ಉಪ್ಪಿ ಹೊಸ ಯುದ್ಧಕ್ಕೆ ಸಜ್ಜಾಗಿದ್ದಾರೆ. ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೇ ಇದನ್ನು ಮಾಡುತ್ತಿದ್ಧಾರೆ ಎಂದು ತಿಳಿಯಬೇಡಿ. ಈಗ ಆಗಬೇಕಿತ್ತು. ಆಗುತ್ತಿದೆ ಅಷ್ಟೇ. ಇದಕ್ಕೆ ಲಹರಿ ಆಡಿಯೋ (Lahari Audio) ಸಂಸ್ಥೆ ಮಾಲೀಕರ ಮಗ ಮನೋಹರ್ ನಾಯ್ಡು ಮಕ್ಕಳಾದ ಚಂದ್ರು, ನವೀನ್ ಹಾಗೂ ಸಲಗ ಕೆ.ಪಿ.ಶ್ರೀಕಾಂತ್ (KP Srikanth)ಬಂಡವಾಳ ಹಾಕಿದ್ದಾರೆ. ಎಲ್ಲರೂ ಒಂದೊಂದೆ ಕೆಲಸವನ್ನು ಹಂಚಿಕೊಂಡಿದ್ದಾರೆ.