ಅರೆ ಬರೆ ಬಟ್ಟೆ ಧರಿಸಿದ ನಟಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಸದ್ದು ಮಾಡುತ್ತಿರುತ್ತಾರೆ. ‘ಬಿಗ್ ಬಾಸ್ ಹಿಂದಿ ಒಟಿಟಿ’ ಶೋನಲ್ಲಿ ಸ್ಪರ್ಧಿಸಿದ ಬಳಿಕ ಉರ್ಫಿ ಜನಪ್ರಿಯತೆ ಹೆಚ್ಚಿದ್ದು ಆ ಬಳಿಕ ಉರ್ಫಿ ನಿತ್ಯ ತಮ್ಮ ಬಟ್ಟೆಯ ಕಾರಣದಿಂದಲೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಯಾರೇ ಏನೇ ಅಂದರು ಕ್ಯಾರೆ ಎನ್ನದ ಉರ್ಫಿ ಮಾತ್ರ ತಮ್ಮ ಪಾಡಿಗೆ ತಾವು ಚಿತ್ರ ವಿಚಿತ್ರ ಬಟ್ಟೆ ಧರಿಸುತ್ತಿರುತ್ತಾರೆ. ಉರ್ಫಯನ್ನು ಅನೇಕರು ವಿರೋಧಿಸುತ್ತಾರೆ ಎಂಬುದು ನಿಜ. ಆದರೆ ಉರ್ಫಿ ಜಾವೇದ್ ಬದುಕಿನಲ್ಲಿ ಅನೇಕ ಕಹಿ ಘಟನೆಗಳು ನಡೆದಿದ್ದು, ಆ ಬಗ್ಗೆ ‘ಹೂಮನ್ಸ್ ಆಫ್ ಬಾಂಬೆ’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
15 ವರ್ಷದ ಬಾಲಕಿ ಆಗಿದ್ದಾಗಲೇ ಉರ್ಫಿ ಫೋಟೋವನ್ನು ಯಾರೋ ಕಿಡಿಗೇಡಿಗಳು ಅಶ್ಲೀಲ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದರು. ಇದರಿಂದ ಉರ್ಫಿ ಜಾವೇದ್ ಅನೇಕ ತೊಂದರೆ ಅನುಭವಿಸಬೇಕಾಯಿತು ಎಂದು ನಟಿ ಹೇಳಿಕೊಂಡಿದ್ದಾರೆ.
‘ನನಗೆ 15 ವರ್ಷ ಆಗಿದ್ದಾಗ ಯಾರೋ ನನ್ನ ಫೋಟೋವನ್ನು ಅಶ್ಲೀಲ ಜಾಲತಾಣದಲ್ಲಿ ಅಪ್ಲೋಡ್ ಮಾಡಿದರು. ಅದು ತುಂಬ ಸರಳವಾದ ಫೋಟೋ ಆಗಿತ್ತು. ನನ್ನ ಫೇಸ್ಬುಕ್ ಖಾತೆಯಿಂದ ಅದನ್ನು ತೆಗೆದುಕೊಳ್ಳಲಾಗಿತ್ತು. ನಿಧಾನವಾಗಿ ಆ ಫೋಟೋ ಎಲ್ಲರಿಗೂ ಕಾಣಿಸಲು ಆರಂಭ ಆಯಿತು. ಎಲ್ಲರೂ ನನ್ನನ್ನು ಅಶ್ಲೀಲ ಸಿನಿಮಾ ನಟಿ ಎಂದು ಕರೆಯಲು ಶುರುಮಾಡಿದರು. ನನ್ನ ವಿಡಿಯೋ ಎಲ್ಲಿದೆ ಅಂತ ನಾನು ಪ್ರಶ್ನಿಸಿದೆ. ಆದರೂ ಕೂಡ ನೀನು ನೀಲಿಚಿತ್ರದ ನಟಿ ಅಂತಲೇ ಜನರು ವಾದಿಸಿದರು’ ಎಂದಿದ್ದಾರೆ ಉರ್ಫಿ ಜಾವೇದ್.
ಅಕ್ಕಪಕ್ಕದವರು ಮಾತ್ರವಲ್ಲದೇ ಸ್ವಂತ ಕುಟುಂಬದವರಿಂದಲೂ ಉರ್ಫಿ ಜಾವೇದ್ ಅವರಿಗೆ ಕಿರಿಕಿರಿ ಅನುಭವಿಸಿದ್ದರು. ‘ನನ್ನ ತಂದೆ ಕೂಡ ನನ್ನನ್ನು ಅಶ್ಲೀಲ ಸಿನಿಮಾ ನಟಿ ಎಂದರು. ಈ ವಿಷಯದಿಂದ ನನ್ನ ತಂದೆ ಸಿಂಪಥಿ ಗಿಟ್ಟಿಸಲು ಪ್ರಯತ್ನಿಸಿದ್ದರು. ಅಶ್ಲೀಲ ಜಾಲತಾಣದವರು 50 ಲಕ್ಷ ರೂಪಾಯಿ ಕೇಳುತ್ತಿದ್ದಾರೆ ಅಂತ ಎಲ್ಲರ ಬಳಿಯೂ ಅಪ್ಪ ಹೇಳುತ್ತಿದ್ದರು. ಅದೆಲ್ಲ ಅಸಾಧ್ಯ ಎಂದು ನಾನು ಹೇಳುತ್ತಿದ್ದೆ. ಯಾರೂ ನನ್ನ ಮಾತು ಕೇಳುತ್ತಿರಲಿಲ್ಲ. ಅವರೆಲ್ಲ ನನಗೆ ಹೊಡೆಯುತ್ತಿದ್ದರು’ ಎಂದು ಉರ್ಫಿ ಜಾವೇದ್ ನೋವು ತೋಡಿಕೊಂಡಿದ್ದಾರೆ.