ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಉರಿಗೌಡ–ನಂಜೇಗೌಡ ಸಿನಿಮಾಕ್ಕೆ ಇದೀಗ ಬ್ರೇಕ್ ಬಿದ್ದಿದೆ. ನಿರ್ಮಲಾನಂದ ಸ್ವಾಮಿಗಳ ಭೇಟಿ ಬಳಿಕ ಇದ್ದಕ್ಕಿದ್ದಂತೆ ಮುನಿರತ್ನ ಯೂಟರ್ನ್ ಹೊಡೆದಿದ್ದಾರೆ. ಉರಿಗೌಡ ನಂಜೇಗೌಡ ಚಿತ್ರದ ಚಿತ್ರೀಕರಣ ನಿರ್ಮಾಣ ಮಾಡುತ್ತೇನೆ ಎಂದಿದ್ದ ಮುನಿರತ್ನ ಇದೀಗ ಸಿನಿಮಾ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಉರಿಗೌಡ–ನಂಜೇಗೌಡ ವಿವಾದಿತ ಸಿನಿಮಾ ಗೊಂದಲಗಳಿಗೆ ಕೊನೆಗೆ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ತೆರೆ ಎಳೆದಿದ್ದಾರೆ.
ಉರಿಗೌಡ-ನಂಜೇಗೌಡ ವರನ್ನು ಆಧರಿಸಿದ ಸಿನಿಮಾ ಮಾಡಲು ನಿರ್ಮಾಪಕ, ಹಾಲಿ ಸಚಿವ ಮುನಿರತ್ನ ಫಿಲ್ಮ್ ಚೇಂಬರ್ನಲ್ಲಿ ಟೈಟಲ್ ರಿಜಿಸ್ಟರ್ಗೆ ಅರ್ಜಿ ಹಾಕಿದ್ದರು. ಅಲ್ಲದೇ ಸಿನಿಮಾದ ಮುಹೂರ್ತ ದಿನಾಂಕವನ್ನೂ ಘೋಷಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಟ್ವೀಟ್ ಮಾಡಿದ್ದ ಮುನಿರತ್ನ ಮೇ 18 ರಂದು ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತ ಮಾಡಲಾಗುವುದು ಎಂದು ಪೋಸ್ಟ್ ಮಾಡಿದ್ದರು.
ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ‘ಉರೀಗೌಡ ನಂಜೇಗೌಡ’ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್.ಅಶ್ವಥ್ ನಾರಾಯಣ್ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ ಎಂದು ಸಚಿವ ಮುನಿರತ್ನ ಅವರು ಟ್ವೀಟ್ ಮೂಲಕ ತಿಳಿಸಿದ್ದರು.
ಉರಿಗೌಡ ದೊಡ್ಡನಂಜೇಗೌಡ ಸಿನಿಮಾ ಮಾಡುವ ನಿರ್ಧಾರದಿಂದ ಮುನಿರತ್ನ ಹಿಂದೆ ಸರಿಯಲು ಕಾರಣ ಏನು ಎನ್ನುವ ಪ್ರಶ್ನೆ ಇದೀಗ ಮೂಡಿದೆ. ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಮಾತುಕತೆ ಬಳಿಕ ಮುನಿರತ್ನ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಇನ್ನು ಈ ಮುನಿರತ್ನ ಅವರೇ ಸ್ಪಷ್ಟನೆ ನೀಡಿದ್ದಾರೆ.
ಕುರುಕ್ಷೇತ್ರ ಸಿನಿಮಾ ಬಳಿಕ ದೊಡ್ಡ ಮಟ್ಟದ ಪೌರಾಣಿಕ ಚಿತ್ರ ಮಾಡಲು ನಿರ್ಧಾರ ಮಾಡಿದ್ದೆ. ಕುಮಾರಸ್ವಾಮಿ, ಅಶ್ವಥ್ ನಾರಾಯಣ್ ಸಿನಿಮಾ ಮಾಡಲು ಮುನಿರತ್ನಗೆ ಹೇಳಿರಬೇಕು ಅಂತ ಅನೇಕರು ಹೇಳಿದೆ. ನಾನು ಈ ಸಿನಿಮಾ ಮಾಡಲು ಮುಂದಾಗಿದೆ. ಈ ವೇಳೆ ಚಿತ್ರ ಮಾಡಲು ಸ್ವಾಮೀಜಿ ಜೊತೆ ಚೆರ್ಚೆ ಮಾಡಿದೆ. ಚರ್ಚೆ ಬಳಿಕ ಬೇರೆಯವ್ರ ಮನಸ್ಸಿಗೆ ನೋವು ಮಾಡೋದು ಬೇಡ ಅಂತ ಅಂದ್ಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಮುನಿರತ್ನ ತಿಳಿಸಿದ್ದಾರೆ.