ಬೆಂಗಳೂರು: ಉರಿಗೌಡ-ನಂಜೇಗೌಡ (Urigowda-Nanjegowda) ಹೆಸರಿನ ವಿವಾದ ವಿಚಾರವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ಗುದ್ದಾಟ ಇನ್ನೂ ನಿಂತಿಲ್ಲ. ಉರಿಗೌಡ-ನಂಜೇಗೌಡ ಹೆಸರಲ್ಲಿ ಕಾಂಗ್ರೆಸ್ (Congress) ಅಣಕು ಆಧಾರ್ ಕಾರ್ಡ್ ಬಿಡುಗಡೆ ಮಾಡಿ ಬಿಜೆಪಿ ಕಾಲೆಳೆದಿದೆ. ಕಾಂಗ್ರೆಸ್ಸಿಗರು ಆಧಾರ್ ಕಾರ್ಡ್ನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಉರಿಗೌಡ ಮತ್ತು ನಂಜೇಗೌಡರಿಗೆ ಅಶ್ವಥ್ ನಾರಾಯಣ್ ತಾಯಿ ಹಾಗೂ ಸಿ.ಟಿ.ರವಿ ತಂದೆ. ಇವರಿಬ್ಬರೂ ಹುಟ್ಟಿದ್ದು ಚುನಾವಣೆ ಹತ್ತಿರ ಬಂದಾಗ. ಇವರ ಜನ್ಮಸ್ಥಳ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ (BJP) ಕಚೇರಿಯಲ್ಲಿ ಎಂದು ಬಿಜೆಪಿಗೆ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.
ಅನೇಕ ಸಂಶೋಧನೆಯ ಬಳಿಕ ಸಿಕ್ಕಿದೆ. ಉರಿಗೌಡ, ನಂಜೇಗೌಡರ ಆಧಾರ್ ಕಾರ್ಡ್ ನಂಬರ್ 420 420 420 420 ಎಂದು ಹಾಕಿ ಕಾಂಗ್ರೆಸ್ ತಿರುಗೇಟು ನೀಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಉರಿಗೌಡ-ನಂಜೇಗೌಡ ಹೆಸರು ರಾಜಕೀಯವಾಗಿ ಮುನ್ನೆಲೆಗೆ ಬಂದಿದೆ. ಟಿಪ್ಪು ಸುಲ್ತಾನ್ ಕೊಂದ ವೀರರಿವರು ಎಂದು ಬಿಜೆಪಿ ಬಿಂಬಿಸುತ್ತಿದೆ. ಒಕ್ಕಲಿಗರ ಓಲೈಕೆಗೆ ಬಿಜೆಪಿ ವೋಟ್ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಟೀಕಿಸುತ್ತಿವೆ. ಇದೇ ಹೊತ್ತಿನಲ್ಲಿ ಉರಿಗೌಡ-ನಂಜೇಗೌಡ ಕುರಿತು ಸಿನಿಮಾ ಮಾಡುವುದಾಗಿ ಬಿಜೆಪಿ ನಾಯಕರು ಘೋಷಿಸಿದ್ದರು. ಆದರೆ ಇದಕ್ಕೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಸಿನಿಮಾ ನಿರ್ಮಾಣ ಕಾರ್ಯ ಕೈಬಿಡಲಾಯಿತು.