ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕನ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ. ಮಂಗಳವಾರ ಆರಂಭವಾದ ಯುನೈಟೆಡ್ ಸ್ಟೇಟ್ಸ್ನಾದ್ಯಂತ ಚುನಾವಣೆಗಳು ಕ್ರಮೇಣ ಮುಕ್ತಾಯಗೊಳ್ಳುತ್ತಿವೆ.
ಅಲಬಾಮಾ, ಫ್ಲೋರಿಡಾ, ಇಂಡಿಯಾನಾ, ಕೆಂಟುಕಿ, ಮಿಸೌರಿ, ಒಕ್ಲಹೋಮ, ಸೌತ್ ಕೆರೊಲಿನಾ, ಟೆನ್ನೆಸ್ಸೀ ಮತ್ತು ವೆಸ್ಟ್ ವರ್ಜೀನಿಯಾದಲ್ಲಿ ಇದುವರೆಗೆ ಟ್ರಂಪ್ಗೆ ಜಯಗಳಿಸಿದೆ ಎಂದು US ಮಾಧ್ಯಮಗಳು ವರದಿ ಮಾಡಿವೆ.
ಕಮಲಾ ಹ್ಯಾರಿಸ್ ಇದುವರೆಗೆ ಮೇರಿಲ್ಯಾಂಡ್, ಮ್ಯಾಸಚೂಸೆಟ್ಸ್, ವರ್ಮೊಂಟ್ ಮತ್ತು US ರಾಜಧಾನಿ ವಾಷಿಂಗ್ಟನ್ DC ಅನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿಯವರೆಗೆ, ಕಮಲಾ ಹ್ಯಾರಿಸ್ 99 ಚುನಾವಣಾ ಮತಗಳನ್ನು ಪಡೆದ್ರೆ, ಟ್ರಂಪ್ಗೆ 178 ಚುನಾವಣಾ ಮತಗಳನ್ನು ಪಡೆದಿದ್ದಾರೆ. ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಮ್ಯಾಜಿಕ್ ಸಂಖ್ಯೆ 270 ಆಗಿದೆ.
ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಡೊನಾಲ್ಡ್ ಟ್ರಂಪ್ ಮಂಗಳವಾರ ಓಹಿಯೋ ಮತ್ತು ಟೆಕ್ಸಾಸ್ ಎರಡನ್ನೂ ಗೆದ್ದಿದ್ದು, ಒಟ್ಟು 57 ಚುನಾವಣಾ ಮತಗಳನ್ನು ಗಳಿಸಿದ್ದಾರೆ. ಓಹಿಯೋದಲ್ಲಿ, ಮಾಜಿ ಅಧ್ಯಕ್ಷರು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸುವ ಮೂಲಕ ಸತತ ಮೂರನೇ ಚುನಾವಣೆಯಲ್ಲಿ ಜಯಗಳಿಸಿದರು. ಟ್ರಂಪ್ ಮೂರನೇ ಬಾರಿಗೆ ಟೆಕ್ಸಾಸ್ನಲ್ಲೂ ಗೆಲುವು ಕಂಡಿದ್ದು, ಇಲ್ಲಿ 40 ಚುನಾವಣಾ ಮತಗಳನ್ನು ಪಡೆದಿದ್ದಾರೆ. 2020ರ ಜನಗಣತಿಯ ನಂತರ ಎರಡು ಹೆಚ್ಚುವರಿ ಚುನಾವಣಾ ಮತಗಳನ್ನು ಗಳಿಸಿದ ಟೆಕ್ಸಾಸ್, ಸುಮಾರು ಐದು ದಶಕಗಳ ಕಾಲ ರಿಪಬ್ಲಿಕನ್ ಪರ ನಿಂತಿದೆ. ಇಲ್ಲಿ1976 ರಲ್ಲಿ ಕೊನೆಯ ಬಾರಿ ಡೆಮಾಕ್ರಟಿಕ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು.
ನ್ಯೂಯಾರ್ಕ್ನ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಕಮಲಾ ಹ್ಯಾರಿಸ್ ರಾಜ್ಯದ 28 ಚುನಾವಣಾ ಮತಗಳನ್ನು ಪಡೆಯುವ ಮೂಲಕ ಗೆದ್ದಿದ್ದಾರೆ. ನ್ಯೂಯಾರ್ಕ್ 1984ರ ಚುನಾವಣೆಯಲ್ಲಿ ರೊನಾಲ್ಡ್ ರೇಗನ್ ಅವರಿಗೆ ಅನುಮೋದನೆ ನೀಡಿದ ನಂತರ ಪ್ರತಿ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಡೆಮೋಕ್ರಾಟ್ಗೆ ಮತ ಹಾಕಿದೆ. ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ತವರು ರಾಜ್ಯದಲ್ಲಿ ಗೆಲುವು ಸಾಧಿಸಲು ಸತತವಾಗಿ ಹೆಣಗಾಡುತ್ತಿದ್ದಾರೆ. ಈವರೆಗೆ ಸ್ಪರ್ಧಿಸಿದ ಮೂರು ಮೂರು ಚುನಾವಣೆಯಲ್ಲೂ ನ್ಯೂಯಾರ್ಕ್ನಲ್ಲಿ ಸೋಲು ಅನುಭವಿಸಿದ್ದಾರೆ.
ಇತ್ತ ಇಂಡಿಯಾನಾ, ಕೆಂಟುಕಿ, ವೆಸ್ಟ್ ವರ್ಜೀನಿಯಾದಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದಾರೆ ಎಂದು ವರದಿಯಾಗಿದ್ದು, ವರ್ಮೊಂಟ್ನಲ್ಲಿ ಕಮಲಾ ಹ್ಯಾರಿಸ್ ಅವರನ್ನು ವಿಜಯಿ ಎಂದು ಘೋಷಿಸಲಾಗಿದೆ. ಇತ್ತ ಮೇರಿಲ್ಯಾಂಡ್ನಲ್ಲಿ 10 ಚುನಾವಣಾ ಮತಗಳನ್ನು ಪಡೆದುಕೊಂಡು US ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜಯಗಳಿಸಿದ್ದಾರೆ. ಅಲಬಾಮಾದಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದಿದ್ದಾರೆ ಎಂದು ವರದಿಯಾಗಿದ್ದು, ಟ್ರಂಪ್ ಇಲ್ಲಿನ ಒಂಬತ್ತು ಚುನಾವಣಾ ಮತಗಳನ್ನು ಪಡೆದುಕೊಂಡಿದ್ದಾರೆ.
ಮಂಗಳವಾರ ಮತದಾನ ಮುಕ್ತಾಯವಾಗುತ್ತಿದ್ದಂತೆ ಪೆನ್ಸಿಲ್ವೇನಿಯಾದಾದ್ಯಂತ ಮತದಾನ ಸ್ಥಳಗಳು ಮತ್ತು ಮುನ್ಸಿಪಲ್ ಕಟ್ಟಡಗಳಿಗೆ ಬಾಂಬ್ ಬೆದರಿಕೆ ವರದಿಯಾಗಿದ್ದು, ರಾಜ್ಯ ಅಧಿಕಾರಿಗಳು ಮತ್ತು FBI ತನಿಖೆಯನ್ನು ನಡೆಸುತ್ತಿದೆ. ಸಾರ್ವಜನಿಕರಿಗೆ ಯಾವುದೇ ವಿಶ್ವಾಸಾರ್ಹ ಬೆದರಿಕೆ ಇಲ್ಲ ಎಂದು ಗವರ್ನರ್ ಜೋಶ್ ಶಾಪಿರೋ ಹೇಳಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.