ನ್ಯೂಯಾರ್ಕ್: ಭಾರತದ ಗಡಿ ಪ್ರದೇಶದಲ್ಲಿ ಚೀನಾ ಮೂಗು ತೂರಿಸುವುದನ್ನು ಮತ್ತೆ ಮುಂದುವರೆಸಿದೆ. ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಹೆಸರುಗಳನ್ನು ಮರುನಾಮಕರಣ ಮಾಡಿರುವ ಚೀನಾಕ್ಕೆ ಇದೀಗ ಅಮೆರಿಕ ತಿರುಗೇಟು ನೀಡಿದೆ.
ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಗುರುತಿಸಲಾಗಿದೆ. ಈ ಪ್ರದೇಶಗಳನ್ನು ಮರುನಾಮಕರಣ ಮಾಡುವ ಮೂಲಕ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಭಾನುವಾರ ಅರುಣಾಚಲ ಪ್ರದೇಶದ 11 ಸ್ಥಳಗಳ ಅಧಿಕೃತ ಹೆಸರುಗಳನ್ನು ಬಿಡುಗಡೆ ಮಾಡಿದೆ. ಆದರೆ ಈ ಪ್ರದೇಶಗಳು ದೀರ್ಘಕಾಲದವರೆಗೆ ಭಾರತದಲ್ಲಿ ಗುರುತಿಸಿಕೊಂಡಿದ್ದು, ಇವು ಭಾರತದ ಅವಿಭಾಜ್ಯ ಅಂಗವಾಗಿವೆ. ಈ ಪ್ರದೇಶಗಳನ್ನ ಮರುನಾಮಕರಣ ಮಾಡುವ ಮೂಲಕ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಚೀನಾದ ಏಕಪಕ್ಷೀಯ ಪ್ರಯತ್ನಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಈ ವಿಚಾರವಾಗಿ ನಾವು ದೀರ್ಘಕಾಲದಿಂದ ಭಾರತದ ಪರವಾಗಿ ನಿಂತಿದ್ದೇವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.