ನ್ಯೂಯಾರ್ಕ್: ಸಾಮಾನ್ಯವಾಗಿ ಎಳೆಯ ಮಕ್ಕಳನ್ನು ಒಂದು ನಿಮಿಷ ಕೂಡ ಬಿಟ್ಟಿರಲು ತಾಯಿ ಹಿಂದೆ ಮುಂದೆ ನೋಡುತ್ತಾಳೆ. ಎಲ್ಲಿಯೇ ಹೋದರು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾಳೆ. ಆದರೆ ಇಲ್ಲೋರ್ವ ಪಾಪಿ ತಾಯಿ ತನ್ನ ಎಂಜಾಯ್ ಮೆಂಟ್ ಗಾಗಿ ಒಂದೂವರೆ ವರ್ಷದ ಮಗುವನ್ನು ಬಿಟ್ಟು ಹೋದ ಪರಿಣಾಮ ಇದೀಗ ತನ್ನ ಮಗುವನ್ನೇ ಕಳೆದುಕೊಂಡಿದ್ದಾಳೆ.
ಅಮೆರಿಕದ ಓಹಿಯೋ ಕ್ರಿಸ್ಟಲ್ ಎ.ಕ್ಯಾಂಡೆಲಾರಿಯೊ (31) ಎಂಬ ಮಹಿಳೆ ತನ್ನ 16 ತಿಂಗಳ ಜೈಲಿನ್ ಹೆಸರಿನ ಮಗುವನ್ನು ಒಂಟಿಯಾಗಿ ಹತ್ತು ದಿನಗಳ ಕಾಲ ಮನೆಯಿಂದ ಹೊರ ಹೋಗಿದ್ದಾಳೆ. ಈ ವೇಳೆ ಮಗು ಊಟ, ತಿಂಡಿ ಇಲ್ಲದೆ ಮೃತಪಟ್ಟಿದ್ದು ಇದೀಗ ಕ್ರಿಸ್ಟಲ್ ಪೊಲೀಸರ ಅತಿಥಿಯಾಗಿದ್ದಾಳೆ.
ಕ್ರಿಸ್ಟಲ್ ತನ್ನ ಹೆಣ್ಣು ಮಗು ಜೈಲಿನ್ ಳನ್ನು ನೋಡಿಕೊಳ್ಳಿ ಎಂದು ಪಕ್ಕದ ಮನೆಯವರಲ್ಲಿ ಹೇಳಿದ್ದಳು. ಆದರೆ ಆಕೆ ಟ್ರಿಪ್ ಹೊರಡುವಾಗ ಯಾರಿಗೂ ಕರೆ ಮಾಡಲಿಲ್ಲ. ಹೀಗಾಗಿ ಮಗುವನ್ನು ಆಕೆ ಕರೆದುಕೊಂಡು ಹೋಗಿರಬಹುದು ಎಂದು ನೆರೆಮನೆಯವರು ಸುಮ್ಮನಿದ್ದರು. ಆದರೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಗು ಹೊಟ್ಟೆಗೆ ಏನೂ ಇಲ್ಲದೆ ಮೃತಪಟ್ಟಿದೆ. ಇತ್ತ ಟ್ರಿಪ್ ಮುಗಿಸಿ ಅಂದರೆ ಜೂನ್ 16 ರಂದು ಮನೆಗೆ ವಾಪಸ್ ಬಂದು ನೋಡಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಾಸಿಗೆಯಲ್ಲಿಯೇ ಮಲ-ಮೂತ್ರ ಮಾಡಿ ಅದರ ಮೇಲೆಯೇ ಮಲಗಿರುವಂತೆ ಕಂಡಿತು. ಇದರಿಂದ ಆತಂಕಗೊಂಡ ಕ್ರಿಸ್ಟಲ್ ಕೂಡಲೇ 911ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಗುವನ್ನು ನೋಡಿದಾಗ ಅದು ಮೃತಪಟ್ಟಿರುವುದು ಬಯಲಾಗಿದ್ದು ಇದೀಗ ಕ್ರಿಸ್ಟಲ್ ಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.