ಆಸ್ಟಿನ್: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕ ತನ್ನನ್ನು ಅಪಹರಿಸುತ್ತಿದ್ದಾನೆಂದು ತಿಳಿದು ಊಬರ್ ಚಾಲಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಟೆಕ್ಸಾಸ್ನಲ್ಲಿ ನಡೆದಿದೆ.
48 ವರ್ಷದ ಫೋಬೆ ಕೊಪಸ್ ಎಂಬ ಮಹಿಳೆ ಊಬರ್ ಕಾರು ಚಾಲಕ ಡೇನಿಯಲ್ ಪೀಡ್ರಾ ಗಾರ್ಸಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾಳೆ. ಮಹಿಳೆಯನ್ನು 1.5 ಮಿಲಿಯನ್ ಡಾಲರ್ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಎಲ್ ಪಾಸೊ ಪೊಲೀಸರು ತಿಳಿಸಿದ್ದಾರೆ.
ಕೆಂಟುಕಿಯಿಂದ ಬಂದಿದ್ದ ಫೋಬೆ ಕೊಪಸ್ ತನ್ನ ಗೆಳೆಯನನ್ನು ಭೇಟಿ ಮಾಡಲು ಟೆಕ್ಸಾಸ್ಗೆ ಊಬರ್ನಲ್ಲಿ ತೆರಳಲು ನಿರ್ಧರಿಸಿದ್ದಳು. ಹೆದ್ದಾರಿಯಲ್ಲಿ ಮೆಕ್ಸಿಕೋ ಚಿಹ್ನೆಗಳನ್ನು ನೋಡಿ ತನ್ನನ್ನು ಅಪಹರಿಸುತ್ತಿದ್ದಾನೆ ಎಂದು ತಿಳಿದ ಆಕೆ ಈ ಕೃತ್ಯ ಎಸಗಿದ್ದಾಳೆ.
ಮಹಿಳೆ ಚಾಲಕನಿಗೆ ಗುಂಡು ಹಾರಿಸುತ್ತಿದ್ದಂತೆ ಕಾರು ಅಪಘಾತಕ್ಕೀಡಾಗಿದೆ. ಬಳಿಕ ಪೊಲೀಸರಿಗೆ ಕರೆ ಮಾಡುವ ಮೊದಲು ಆಕೆ ಘಟನೆಯ ಫೋಟೋ ತೆಗೆದು ಅದನ್ನು ತನ್ನ ಗೆಳೆಯನಿಗೆ ಕಳುಹಿಸಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಊಬರ್ ಸಂಸ್ಥೆ ಹಿಂಸಾಚಾರವನ್ನು ನಾವು ಸಹಿಸುವುದಿಲ್ಲ. ಮಹಿಳೆಯನ್ನು ಊಬರ್ ಸೇವೆಯಿಂದ ನಿಷೇಧಿಸಲಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಈ ಬಗ್ಗೆ ಚಾಲಕನ ಕುಟುಂಬಸ್ಥರು ಆರೋಪಿಯ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ, ಚಾಲಕನ ಹತ್ಯೆಯಿಂದಾಗಿ ಚಾಲಕನ ಕುಟುಂಬದ ಆಧಾರವೇ ಇಲ್ಲದಂತಾಗಿದೆ ಎಂದು ಕುಟುಂಬಸ್ಥರು ಕಣ್ಣಿರಿಟ್ಟಿದ್ದಾರೆ.