ಮುಂಬೈ: ಮೊಘಲ್ ಚಕ್ರವರ್ತಿ ಔರಂಗಜೇಬ್ (Aurangzeb) ಚಿತ್ರವನ್ನು ತನ್ನ ವಾಟ್ಸಾಪ್ (Whatsapp) ಪ್ರೊಫೈಲ್ ಫೋಟೋ ವನ್ನಾಗಿ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ (Mumbai) ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 298 ಅಡಿಯಲ್ಲಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಮತ್ತು 153 ಎ ಅಡಿಯಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಪ್ರಕರಣ ದಾಖಲಿಸಲಾಗಿದೆ.
ಬಂಧನದ ಬಳಿಕ ಆತನನ್ನು ವಿಚಾರಣೆ ನಡೆಸಿ, ಸೂಕ್ತ ಉತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಿ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂ ಪರ ಸಂಘಟನೆಗಳು ಔರಂಗಜೇಬ್ ಚಿತ್ರ ಹಾಕಿರುವ ಸ್ಕ್ರೀನ್ಶಾಟ್ನ್ನು ಪೊಲೀಸರಿಗೆ ಸಲ್ಲಿಸಿ, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದವು.
ಇತ್ತೀಚೆಗೆ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ವಿಚಾರವಾಗಿ ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಕೋಮು ಉದ್ವಿಗ್ನ ಘಟನೆಗಳು ನಡೆದಿದ್ದವು. ಕೊಲ್ಹಾಪುರದಲ್ಲಿ (Kolhapur) ಟಿಪ್ಪು ಸುಲ್ತಾನ್ (Tipu Sultan) ಚಿತ್ರವನ್ನು ಆಕ್ಷೇಪಾರ್ಹ ಆಡಿಯೋದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಇದರಿಂದಾಗಿ ಕಲ್ಲು ತೂರಾಟ ನಡೆದಿತ್ತು. ಅಲ್ಲದೇ ಮೆರವಣಿಗೆಯೊಂದರಲ್ಲಿ ಔರಂಗಜೇಬ್ ಫೋಟೋಗಳನ್ನು ಪ್ರದರ್ಶಿಸಲಾಗಿತ್ತು. ಇದರಿಂದಾಗಿ ನಡೆದ ಗಲಭೆಯಲ್ಲಿ ಹಲವರು ಗಾಯಗೊಂಡಿದ್ದರು