ಲಖನೌ: ಮತ್ತೊಂದು ಹಿಟ್ ಆಂಡ್ ರನ್ ಪ್ರಕರಣ ಉತ್ತರಪ್ರದೇಶದಾದ್ಯಂತ ಸದ್ದು ಮಾಡಿದೆ. ಟ್ರಕ್ ಒಂದು ಸ್ಕೂಟಿಗೆ ಡಿಕ್ಕಿ ಹೊಡೆದು 6 ವರ್ಷದ ಮಗುವನ್ನು 2 ಕಿ.ಮೀಗೂ ಅಧಿಕ ದೂರ ಎಳೆದೊಯ್ದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಅಜ್ಜ ಉದಿತ್ ನಾರಾಯಣ ಚಾನ್ಸೋರಿಯಾ(67)ಹಾಗೂ ಮೊಮ್ಮಗ ಸಾತ್ವಿಕ್ ಮಾರುಕಟ್ಟೆಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಘಟನೆ ನಡೆದಿದೆ.
ವೇಗವಾಗಿ ಬಂದ ಟ್ರಕ್ ಒಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ, ಬಳಿಕ ಉದಿತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ, ಸಾತ್ವಿಕ್ನನ್ನು 2 ಕಿ.ಮೀ ದೂರದವರೆಗೆ ಟ್ರಕ್ ಎಳೆದುಕೊಂಡು ಹೋಗಿದೆ. ಕಾನ್ಪುರ್-ಸಾಗರ್ ಹೆದ್ದಾರಿ NH86ನಲ್ಲಿ ಈ ಘಟನೆ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಹಲವು ಬೈಕ್ ಸವಾರರು ಟ್ರಕ್ ಅನ್ನು ನಿಲ್ಲಿಸಲು ಪ್ರಯತ್ನಿಸಿದ್ದನ್ನು ಕಾಣಬಹುದು, ಕೊನೆಗೆ ರಸ್ತೆಯಲ್ಲಿ ಕಲ್ಲುಗಳನ್ನಿಟ್ಟ ಕಾರಣ ಟ್ರಕ್ ನಿಂತಿತ್ತು, ಟ್ರಕ್ ಚಾಲಕನನ್ನು ಥಳಿಸಿ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.