ಲಕ್ನೋ: ರಣ ಬಿಸಿಲಿನ ತಾಪದಿಂದ (High Temperature) ಬಳಲುತ್ತಿರುವ ಉತ್ತರ ಪ್ರದೇಶದಲ್ಲಿ (Uttar Pradesh) ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ (Mansukh Mandaviya) ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ರಾಜ್ಯವು ಶಾಖದ ಅಲೆಗೆ ನಲುಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.
ಹೌದು. ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಖದ ಅಲೆಗೆ ಸಾವು ನೋವುಗಳು ವರದಿಯಾಗಿವೆ.
UP ನಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ 54 ಮಂದಿ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಹಠಾತ್ ಸಾವುಗಳು, ಜ್ವರ, ಉಸಿರಾಟದ ತೊಂದರೆ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳು ಭರ್ತಿಯಾಗುತ್ತಿವೆ. ಬಿಹಾರದಲ್ಲೂ 44 ಮಂದಿ ಸಾವನ್ನಪ್ಪಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಏಪ್ರಿಲ್ನಿಂದ ಜೂನ್ವರೆಗೆ ಭಾರತದಲ್ಲಿ ತಾಪಮಾನ ಹೆಚ್ಚಾಗಿರಲಿದೆ ಎಂದು ಹೇಳಿತ್ತು. ಅದಂತೆಯೇ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ರಣಬಿಸಿಲು ಜನರನ್ನ ಸುಡುತ್ತಿದೆ. ಈ ಪ್ರದೇಶಗಳಿಗೆ ಹಮಾವಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.