ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ, ಚಾಮರಾಜನಗರ ಕ್ಷೇತ್ರಕ್ಕೆ ಟಿಕೆಟ್ ನೀಡಿದರೆ ಗೋ ಬ್ಯಾಕ್ ಚಳವಳಿ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್ ಎಚ್ಚರಿಸಿದರು.
ವಿ.ಸೋಮಣ್ಣ ಅವರು ೨೦೧೮ರ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ. ಪಕ್ಷದ ಸಂಘಟನೆಯಲ್ಲಿ ಯಾವುದೇ ಕೊಡುಗೆ ಇಲ್ಲ. ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ನಾಯಕರಿಗೆ ಸೋಮಣ್ಣ ಬಗ್ಗೆ ಒಲವಿಲ್ಲ. ಪಕ್ಷದ ನಾಯಕರಿಗೆ ಚುನಾವಣಾ ಉಸ್ತುವಾರಿ ಹಾಗೂ ಚಾ.ನಗರ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ದೂರಿದರು.
ವಿ.ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದು ಒಳ್ಳೆಯ ವಾತಾವರಣ ಸೃಷ್ಟಿಸಲು ಆಗಿಲ್ಲ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಾತಾವರಣವಿದೆ. ಆದ್ದರಿಂದ ಮೈಸೂರು ಭಾಗಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಚುನಾವಣಾ ಉಸ್ತುವಾರಿ ಕೊಡಬೇಕು. ಜೊತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೆಚ್ಚು ಪ್ರಚಾರ ಮಾಡಿದರರೆ ಹೆಚ್ಚು ಸ್ಥಾನ ಗೆಲ್ಲಬಹುದು ಎಂದು ತಿಳಿಸಿದರು.
೨೦೧೮ರಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ಗೆದ್ದವರಿಗೆ ತನ್ನ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ಪುಟ್ಟರಂಗಶೆಟ್ಟಿ ಅವರನ್ನು ಗೆಲ್ಲಿಸಿ. ಅವರಾದರೆ ಕರಿಕಲ್ಲು ಕ್ವಾರಿ ಕಡೆ ಗಮನಹರಿಸುತ್ತಾರೆ. ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಬಹುದು ಎಂದು ಬಿಜೆಪಿಯ ಕೆಲ ಕಾರ್ಯಕರ್ತರಿಗೆ ಹೇಳಿದ್ದಾರೆ ಎಂದು ದೂರಿದರು.
ವಿ.ಸೋಮಣ್ಣ ಅವರು ಪಕ್ಷದ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿರಲಿಲ್ಲ. ಅಲ್ಲದೇ ಮ.ಬೆಟ್ಟದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲೂ ಗೈರಾಗಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯು ಹೆಚ್ಚು ಸ್ಥಾನ ಗೆಲ್ಲಲು ರಾಷ್ಟç ಹಾಗೂ ರಾಜ್ಯ ನಾಯಕರಿಗೆ ಸೂಚನೆ ಇದೆ. ಚುನಾವಣಾ ಉಸ್ತುವಾರಿ ಕೊಟ್ಟರೆ ಪಕ್ಷದ ಪರ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಚಂದಕವಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜೇಂದ್ರ, ಉಡಿಗಾಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಶೇಖರ್, ಹರದನಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಶೇಖರ್, ಅಮಚವಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬೆಳ್ಳಪ್ಪ, ಆಲೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಾನಂದ, ಮಾದಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಮಾರಸ್ವಾಮಿ ಇದ್ದರು.