ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸತತ 8 ಗಂಟೆಗಳ ಕಾಲ ಮಾಜಿ ಸಚಿವ ನಾಗೇಂದ್ರ ಅವರನ್ನು SIT ಬೆವರಿಳಿಸಿದೆ. ಹಾಗೆ ಇಂದು ಮತ್ತೆ ತನಿಖೆ ಮುಂದುವರಿದಿದೆ.
ಮಾಜಿ ಸಚಿವ ನಾಗೇಂದ್ರ ನಿನ್ನೆ ಸುಮಾರು 8 ಗಂಟೆಗಳ ಕಾಲ ವಿಶೇಷ ತನಿಖಾ ತಂಡದ ತನಿಖೆ ಎದುರಿಸಿದರು. ಶಾಸಕ ಬಸವನಗೌಡ ದದ್ದಲ್ ಅವರನ್ನೂ ನಾಲ್ಕು ಗಂಟೆಗಳ ಕಾಲ ಪ್ರಶ್ನಿಸಲಾಗಿದೆ.
ಇಂದು ಮತ್ತೆ ತನಿಖೆಗೆ ಹಾಜರಾಗುವಂತೆ ಇಬ್ಬರಿಗೂ ನೋಟೀಸ್ ನೀಡಲಾಗಿದೆ. ಪ್ರಕರಣದ ಬಗ್ಗೆ ಇಬ್ಬರನ್ನೂ ಪ್ರತ್ಯೇಕವಾಗಿ ಪ್ರಶ್ನಿಸಲಾಗುತ್ತಿದೆ. ಹಗರಣ ನಡೆದ ಸಂದರ್ಭದಲ್ಲಿ ನಾಗೇಂದ್ರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಶಾಸಕ ದದ್ದಲ್ ಈಗಲೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ.
ನಿನ್ನೆ ಬೆಳಗ್ಗೆ 11 ಗಂಟೆಗೆ ಎಸ್ಐಟಿ ಮುಂದೆ ವಿಚಾರಣೆಗೆ ನಾಗೇಂದ್ರ ಹಾಜರಾಗಿದ್ದರು. ಎಸ್ಐಟಿ 8 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತ್ತು. ಇಂದು ಮತ್ತೆ ವಿಚಾರಣೆಗೆ ಬರುವಂತೆ ನೋಟೀಸ್ ನೀಡಲಾಗಿದೆ. ನಿನ್ನೆ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಎಸ್.ಐ.ಟಿ ವಿಚಾರಣೆಗೆ ಹಾಜರಾಗಿದ್ದ ದದ್ದಲ್, ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿ ತೆರಳಿದರು. ಅವರಿಗೂ ಮತ್ತೆ ಬರುವಂತೆ ನೋಟೀಸ್ ಕೊಡಲಾಗಿದೆ.
ಹಗರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ನಿಗಮದ ಅಧೀಕ್ಷಕ ಚಂದ್ರಶೇಖರ್, ತಮ್ಮ ಡೆತ್ ನೋಟ್ನಲ್ಲಿ ನಾಗೇಂದ್ರ ಹೆಸರನ್ನೂ ಪ್ರಸ್ತಾವಿಸಿದ್ದರು. ಈಗಾಗಲೇ ಹಗರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ನಿಗಮದ ಎಂಡಿ ಪದ್ಮರಾಜ್, ಸಿಎ ಪರಶುರಾಮ್ ಬಂಧನದಲ್ಲಿದ್ದಾರೆ.