ಬೆಂಗಳೂರು: ಒಂಟಿತನ ಕಾಡುತ್ತಿದೆ ಎಂದು ಆಸ್ಪತ್ರೆಯಿಂದ ಮಗು ಕಳ್ಳತನ ಮಾಡಿದ್ದ ಕಳ್ಳಿಯನ್ನು ಪೊಲೀಸರು( police) ಕೊನೆಗೂ ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ(vaani vilas hospital) ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಗು ಕಿಡ್ನಾಪ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಳ್ಳಿ ಅರೆಸ್ಟ್ ಆಗಿದ್ದು, ವಿವಿ ಪುರಂ ಪೊಲೀಸರಿಂದ ಬಂಧಿಸಲಾಗಿದೆ. ದಿವ್ಯ ರಶ್ಮಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಒಂದು ವಾರದ ಮಗು ಕಿಡ್ನಾಪ್ ಆದ ಬಳಿಕ ಮಗು ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಬಳಿಕ ವಾಣಿ ವಿಲಾಸ ಆಸ್ಪತ್ರೆ, ಮೈಸೂರು ರಸ್ತೆಯಲ್ಲಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಲಾಗಿತ್ತು.
ದಾರಿಯುದ್ದಕ್ಕೂ 600 ಸಿಸಿಟಿವಿಗಳನ್ನ ಪೊಲೀಸರು ಪರಿಶೀಲನೆ ಮಾಡಿದ ಬಳಿಕ ಒಂದು ಕ್ಲೂ ಸಿಕ್ತು. ಆರೋಪಿ ಮಹಿಳೆ ಆಸ್ಪತ್ರೆಗೆ ಬಂದು ಮಗುವನ್ನು ಕದ್ದು ಆಕೆ ತನ್ನ ಮನೆಗೆ ತೆಗೆದುಕೊಂಡು ಹೋಗುವವರೆಗಿನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 600 ಸಿಸಿ ಕ್ಯಾಮರಾಗಳ ಪರಿಶೀಲನೆ ಬಳಿಕ ಕಿಡ್ನಾಪ್ ಆಗಿದ್ದ ಮಗುವಿನ ಸುಳಿವು ಸಿಕ್ಕಿದೆ. ದಿವ್ಯಾ ರಶ್ಮಿಗೆ ಮದುವೆಯಾಗಿದ್ದು ಗಂಡ ಕೆಲ ವರ್ಷಗಳ ಬಳಿಕ ಸಾವನ್ನಪ್ಪಿದ್ದ. ಮಕ್ಕಳಿಲ್ಲದ ಕಾರಣ ರಶ್ಮಿಗೆ ಯಾವಾಗಲೂ ಒಂಟಿತನ ಕಾಡ್ತಾ ಇತ್ತು.
ಬೇರೆ ಮದುವೆ ಆಗಲು ಮನಸ್ಸು ಒಪ್ಪಲಿಲ್ಲ ಅಂತ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಳು. ಆಗಷ್ಟೇ ಹುಟ್ಟಿದ ಮಗು ಆದ್ರೆ ನಾನೇ ಸಾಕಬಹುದು, ನಂದೇ ಮಗು ಎಂಬಂತೆ ಆಗುತ್ತೆ ಎಂದು ನಿರ್ಧರಿಸಿ ಏಪ್ರಿಲ್ 15ರಂದು ವಾಣಿ ವಿಲಾಸ ಆಸ್ಪತ್ರೆಗೆ ಬಂದು ಎಲ್ಲಾ ವಾರ್ಡ್ಗಳನ್ನು ಸುತ್ತಾಡಿದಳು. ಬಳಿಕ ವಾರ್ಡ್ನಲ್ಲಿದ್ದ ಮಗು ನೋಡಿ ಕಿಡ್ನಾಪ್ ಮಾಡಿದ್ದಳು. ತಾಯಿ ಮಗುವನ್ನು ಬಿಟ್ಟು ವಾಶ್ ರೂಂಗೆ ಹೋಗಿದ್ದಾಗ ಆರೋಪಿ ರಶ್ಮಿ ಮಗು ಕದ್ದು ಎಸ್ಕೇಪ್ ಆಗಿದ್ದಳು. ಸದ್ಯ ವಿವಿಪುರಂ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ