ಸದಾ ವಿವಾದಗಳಿಂದ ಸುದ್ದಿಯಾಗುವ ನಟಿ ವನಿತಾ ವಿಜಯ್ಕುಮಾರ್ ಇದೀಗ ನಾಲ್ಕನೇ ಮದುವೆಯಾಗಲು ರೆಡಿಯಾಗಿದ್ದಾರೆ. ಸದ್ಯ ವನಿತಾ ವಿಜಯ್ ಕುಮಾರ್ ಅವರಿಗೆ 43 ವರ್ಷ ವಯಸ್ಸಾಗಿದ್ದು ಮತ್ತೆ ಮದುವೆಯಾಗಲು ಮುಂದಾಗಿದ್ದಾರೆ. ಹಿಂದಿನ ಮೂವರು ಪತಿಯರಿಗೆ ಡಿವೋರ್ಸ್ ನೀಡಿರುವ ವನಿತಾ ಇದೀಗ ಹಳೇ ಗೆಳೆಯ ರಾಬರ್ಟ್ಗೆ ಪ್ರಪೋಸ್ ಮಾಡಿದ್ದು ಅದರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಡಲ ತೀರದಲ್ಲಿ ವನಿತಾ ವಿಜಯ್ಕುಮಾರ್ ಅವರು ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಈ ಫೋಟೋದಲ್ಲಿ ರಾಬರ್ಟ್ ಅವರು ನಗು ಬೀರಿದ್ದಾರೆ. ‘ದಿನಾಂಕ ನೆನಪಿಟ್ಟುಕೊಳ್ಳಿ. 5 ಅಕ್ಟೋಬರ್ 2024. ವನಿತಾ ವಿಜಯ್ ಕುಮಾರ್ ಲವ್ಸ್ ರಾಬರ್ಟ್’ ಎಂದು ಈ ಫೋಟೋಗೆ ಕ್ಯಾಪ್ಷನ್ ನೀಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ಈ ಫೋಟೋವನ್ನು ರಾಬರ್ಟ್ ಕೂಡ ಶೇರ್ ಮಾಡಿಕೊಂಡಿದ್ದು, ‘ವಿಆರ್. ದೊಡ್ಡ ಘೋಷಣೆ. 5 ಅಕ್ಟೋಬರ್ 2024’ ಎಂದು ಬರೆದುಕೊಂಡಿದ್ದಾರೆ.
ವನಿತಾ ವಿಜಯ್ಕುಮಾರ್ ಅವರು 2000ನೇ ಇಸವಿಯಲ್ಲಿ ಮೊದಲ ಮದುವೆ ಆಗಿದ್ದರು. ಆದರೆ 2007ರಲ್ಲಿ ಅವರು ವಿಚ್ಛೇದನ ಪಡೆದರು. ಬಳಿಕ 2007ರಲ್ಲಿ ರಾಜನ್ ಆನಂದ್ ಜೊತೆ ಅವರ ಎರಡನೇ ಮದುವೆ ನೆರವೇರಿತು. ಆ ವಿವಾಹ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. 2012ರಲ್ಲಿ ಈ ಮದುವೆ ಕೂಡ ಮುರಿದುಬಿತ್ತು. 2020ರಲ್ಲಿ ಪೀಟರ್ ಪೌಲ್ ಜೊತೆ ವನಿತಾ ಅವರು 3ನೇ ಮದುವೆಯಾದರು. ಕೆಲವೇ ದಿನಗಳಲ್ಲಿ ಅವರಿಬ್ಬರ ದಾಂಪತ್ಯ ಹಳಸಿತು.
ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ವನಿತಾ ವಿಜಯ್ಕುಮಾರ್ ಅವರಿಗೆ ಉತ್ಸಾಹ ಕಡಿಮೆ ಆಗಿಲ್ಲ. ಈಗ ಕೋರಿಯೋಗ್ರಾಫರ್ ರಾಬರ್ಟ್ ಜೊತೆ ಅವರಿಗೆ ಪ್ರೀತಿ ಚಿಗುರಿದೆ. ಅಕ್ಟೋಬರ್ 5ರಂದು ಅವರು ಮದುವೆ ಆಗುವ ಸಾಧ್ಯತೆ ಇದೆ. ಇದು ಪ್ರಚಾರದ ಗಿಮಿಕ್ ಕೂಡ ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ, ರಾಬರ್ಟ್ ಮತ್ತು ವನಿತಾ ಗೆಳೆತನ ಹೊಸದೇನೂ ಅಲ್ಲ. 2013ರಲ್ಲೇ ವನಿತಾ ಮತ್ತು ರಾಬರ್ಟ್ ಅವರು ಡೇಟಿಂಗ್ ಮಾಡಿದ್ದರು. ಬಳಿಕ ಬ್ರೇಕಪ್ ಆಗಿತ್ತು. ಈಗ ಮತ್ತೆ ಹಳೇ ಗೆಳೆಯನ ಜೊತೆಗೆ ವನಿತಾಗೆ ಪ್ರೀತಿ ಹುಟ್ಟಿದೆ.