ಬೆಂಗಳೂರು;- ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಬಿಗ್ ಬಾಸ್ ರಿಯಾಲಿಟಿ ಶೋವಿನ ಸ್ಪರ್ಧಿ ವರ್ತೂರ್ ಸಂತೋಷ್ ಕುಮಾರ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2ನೇ ಹೆಚ್ಚುವರಿ ಎಸಿಜೆಎಂ ನ್ಯಾಯಾಲಯ ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿದೆ.
ವರ್ತೂರ್ ಸಂತೋಷ್ ಕುಮಾರ್ ಜಾಮೀನು ಅರ್ಜಿ ಸಂಬಂಧ ಗುರುವಾರ ಸರ್ಕಾರಿ ಅಭಿಯೋಜಕರ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ, ಶುಕ್ರವಾರ ತೀರ್ಪು ನೀಡುವುದಾಗಿ ತಿಳಿಸಿತು.
ಇದಕ್ಕೂ ಮುನ್ನ ಸರ್ಕಾರಿ ಅಭಿಯೋಜಕ ಎಚ್.ಎನ್. ಮಧುಸೂಧನ ಅವರು, ಬಂಧನದ ವೇಳೆ ಆರೋಪಿಯ ಕುತ್ತಿಗೆಯಲ್ಲಿಯೇ ಹುಲಿ ಉಗುರು ಇತ್ತು. ಆಭರಣವನ್ನು ಹುಲಿ ಉಗುರಿನಿಂದಲೇ ಮಾಡಿಸಿರುವುದಾಗಿ ಆರೋಪಿಯೇ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇದುವರೆಗಿನ ತನಿಖೆಯಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವಾದಿಸಿದ್ದರು. ಆರೋಪಿಯ ಕೃತ್ಯವು ವನ್ಯಜೀವಿಯ ಜೀವಿಸುವ ಹಕ್ಕನ್ನು ಕಿತ್ತುಕೊಂಡಂತಾಗಿದೆ. ಹುಲಿ ಉಗುರು ಎಲ್ಲಿಂದ ಬಂದಿದೆ, ಆ ಉಗುರು ಯಾವ ಹುಲಿಯದ್ದು ಹಾಗೂ ಯಾರಿಂದ ಖರೀದಿ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ.
ಪ್ರಕರಣದ ಎರಡನೆ ಮತ್ತು ಮೂರನೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಎರಡನೇ ಆರೋಪಿ ರಂಜಿತ್ ಮೂಲಕ ಹುಲಿ ಉಗುರು ಪಡೆದಿರುವುದಾಗಿ ಅರ್ಜಿದಾರ ಹೇಳಿದ್ದಾನೆ. ತಲೆಮರೆಸಿಕೊಡಿರುವ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಿದೆ. ಅರ್ಜಿದಾರನ ಅಪರಾಧ ಕೃತ್ಯಕ್ಕೆ ಮೂರರಿಂದ ಏಳು ವರ್ಷ ಶಿಕ್ಷೆಗೆ ಅರ್ಹವಾಗಿದೆ. ಸದ್ಯ ಜಾಮೀನು ನೀಡಿದರೆ, ಆರೋಪಿಯು ತಲೆಮರೆಸಿಕೊಳ್ಳುವ ಹಾಗೂ ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಆದ್ದರಿಂದ ಜಾಮೀನು ನೀಡಬಾರದು ಎಂದು ಕೋರಿದರು. ಈ ವಾದವನ್ನು ಅಲ್ಲಗಳೆದ ಸಂತೋಷ್ ಪರ ವಕೀಲರು, ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದೆ ಎಂದರು.