ಬೆಂಗಳೂರು: ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಟ್ರೋಫಿಗಳನ್ನು ಸಂಗ್ರಹಿಸುವುದರಲ್ಲಿ ನಿಸ್ಸೀಮರು. ಇನ್ನು ಪಂದ್ಯ ಗೆದ್ದ ಬಳಿಕ ಸ್ಟಂಪ್ಗಳನ್ನು ಹೊತ್ತೊಯ್ದು ಅದನ್ನು ಸಂಗ್ರಹಿಸಿಡುವುದು ಧೋನಿಯ ಹವ್ಯಾಸ ಎಂಬುದು ಕ್ರಿಕೆಟ್ ಪ್ರಿಯರಿಗೆ ತಿಳಿದೇ ಇದೆ. ಅಂದಹಾಗೆ ಕ್ರಿಕೆಟ್ನಿಂದ ಆಚೆಗೂ ಧೋನಿ ವಿಶೇಷ ಹವ್ಯಾಸ ಒಂದನ್ನು ಹೊಂದಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕನಿಗೆ ಕಾರುಗಳು ಮತ್ತು ಬೈಕ್ಗಳು ಎಂದರೆ ಬಲು ಪ್ರೀತಿ. ಇದೇ ಪ್ರೀತಿಯಿಂದ ಸಂಗ್ರಹಿಸಿದ ನೂರಾರು ಬಗೆಬಗೆಯ ಬೈಕ್ಗಳು ಮತ್ತು ಕಾರುಗಳ ಸಲುವಾಗಿ ವಿಶೇಷ ಸಂಗ್ರಹಾಲಯವನ್ನೇ ನಿರ್ಮಿಸಿದ್ದಾರೆ.
ಧೋನಿ ತಮ್ಮ ಹುಟ್ಟೂರು ರಾಂಚಿಯಲ್ಲಿ ಕಟ್ಟಿರುವ ಫಾರ್ಮ್ ಹೌಸ್ (ತೋಟದ ಮನೆ)ನಲ್ಲಿ ನಿರ್ಮಿಸಿರುವ ಕಾರ್ ಮತ್ತು ಬೈಕ್ಗಳ ಸಂಗ್ರಹಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಭಾರತ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಹುಚ್ಚು ಹವ್ಯಾಸ ಒಂದರ ಪರಮಾವಧಿ ಕಂಡು ಅಕ್ಷರಶಃ ಬೆರಗಾಗಿದ್ದಾರೆ. ಕಾರು ಮತ್ತು ಬೈಕ್ಗಳ ಬಗ್ಗೆ ಇಷ್ಟು ಹುಚ್ಚು ಹೊಂದಿರುವವರಿಂದ ಮಾತ್ರವೇ ಇಂಥದ್ದೊಂದು ಸಂಗ್ರಹಾಲಯ ಕಟ್ಟಲು ಸಾಧ್ಯ ಎಂದು ಹೇಳಿಕೊಂಡಿರುವ ವೆಂಕಿ, ತಮ್ಮ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಧೋನಿ ಸಂಗ್ರಹಾಲಯದ ಝಲಕ್ ಇರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದು, ಧೋನಿ ಇಟ್ಟಿರುವ ಹಲವಾರು ಬೈಕ್ಗಳನ್ನು ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ.
“ಒಬ್ಬ ವ್ಯಕ್ತಿಯಲ್ಲಿ ನಾ ಕಂಡಂತಹ ಅತ್ಯಂತ ಹುಚ್ಚುತನದ ಹವ್ಯಾಸವಿದು. ಎಂತಹ ಅದ್ಭುತ ಸಂಗ್ರಹ. ಎಂಎಸ್ಡಿ ಅದ್ಭುತ ಮನುಷ್ಯ. ಶ್ರೇಷ್ಠ ಸಾಧಕ, ಅಷ್ಟೇ ಅಮೋಘ ವ್ಯಕ್ತಿ. ರಾಂಚಿಯಲ್ಲಿ ಈತ ಹೊಂದಿರುವ ಬೈಕ್ ಮತ್ತು ಕಾರ್ಗಳ ಸಂಹ್ರಹಾಲಯದ ಝಲಕ್ ಇದು. ಇದನ್ನು ಕಂಡು, ಇದರ ಮೇಲೆ ಈತನ ಒಲವನ್ನು ಕಂಡು ಮಾರುಹೋಗಿದ್ದೇನೆ. ಇದನ್ನು ಬೈಕ್ ಶೋ ರೂಮ್ ಮಾಡಬಹುದು. ಬೈಕ್ ಮತ್ತು ಕಾರುಗಳ ಮೇಲೆ ಹುಚ್ಚಿರುವ ವ್ಯಕ್ತಿಯಿಂದ ಮಾತ್ರವೇ ಇದನ್ನು ಮಾಡಲು ಸಾಧ್ಯ. ಇಷ್ಟು ಬೈಕ್ಗಳನ್ನು ಹೊಂದಲು ಬೇರೆ ಯಾರಿಂದಲೂ ಸಾಧ್ಯವಾಗುವುದಿಲ್ಲ,” ಎಂದು ವೆಂಕಟೇಶ್ ಪ್ರಸಾದ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.