ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಲೀಲಾವತಿ (Leelavati) ಅವರ ನಿಧನಾ ನಂತರ ಮನೆಯಲ್ಲಿ 11ನೇ ದಿನದ ಸ್ಮರಣೆ ಕಾರ್ಯ ನಡೆಯುತ್ತಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಮತ್ತು ಕುಟುಂಬ 11ನೇ ದಿನದ ಕಾರ್ಯವನ್ನು ನೆರವೇರಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಪೂಜೆ ಕಾರ್ಯಗಳು ಶುರುವಾಗಿದ್ದು, ಸಿನಿಮಾ ರಂಗದ ಗಣ್ಯರು ಆಗಮಿಸುವ ಸಾಧ್ಯತೆಯಿದೆ.
ಕನ್ನಡ ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದ ಲೀಲಾವತಿ (Leelavati) ಅವರು, ಆನಂತರ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ನಟಿಸಿದವರು. ತಮಿಳು, ತೆಲುಗು, ಕನ್ನಡ, ಮಲೆಯಾಳಂ ಸೇರಿದಂತೆ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. 1949ರಲ್ಲಿ ತೆರೆ ಕಂಡ ಶಂಕರ್ ಸಿಂಗ್ ಅವರ ನಾಗಕನ್ನಿಕ ಇವರ ಮೊದಲ ಚಿತ್ರ. ಇದಕ್ಕೂ ಮೊದಲು ಲೀಲಾವತಿ ಅವರು ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.
ಕಯಾದುವಿನ ಸಖಿ, ಭಕ್ತ ಪ್ರಹ್ಲಾದ ಸೇರಿದಂತೆ ಸಾಕಷ್ಟು ನಾಟಕಗಳಲ್ಲಿ ಇವರು ಅಭಿನಯಿಸಿದ್ದಾರೆ. ಸಿನಿಮಾ ರಂಗಕ್ಕೆ ಬಂದ ನಂತರ, ಭಕ್ತ ಕುಂಬಾರ ಮನೆ ಮೆಚ್ಚಿದ ಸೊಸೆ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಕ್ಕಚಿಕ್ಕ ಪಾತ್ರಗಳನ್ನೇ ಮಾಡುತ್ತಾ ಬಂದಿದ್ದ ಲೀಲಾವತಿ ಅವರು, ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ಮಾಂಗಲ್ಯ ಯೋಗ. ನಂತರ ಡಾ.ರಾಜ್ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ರಣಧೀರ ಕಂಠೀರವ ಸಿನಿಮಾದಲ್ಲಿ ನಟಿಸಿದರು.