ಲೋಕಸಭೆ ಹಾಗೂ ರಾಜ್ಯಸಭೆಯಿಂದ 141 ಸಂಸದರನ್ನು ಅಮಾನತು ಮಾಡಿದ್ದನ್ನು ಖಂಡಿಸಿ ಇಂಡಿಯಾ ಒಕ್ಕೂಟದ ಸಂಸದರು ನಿನ್ನೆ ಪ್ರತಿಭಟಿಸಿದ್ದರು. ಈ ವೇಳೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಜಗದೀಪ್ ಧನಕರ್ ಬಗ್ಗೆ ಮಿಮಿಕ್ರಿ ಮಾಡಿದ್ದರು. ಈ ದೃಶ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಉಪರಾಷ್ಟ್ರಪತಿಗೆ ಫೋನ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರಂತೆ.
ಟ್ವೀಟ್ ಮಾಡಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್.. ಪ್ರಧಾನಿ ನರೇಂದ್ರ ಮೋದಿ ನನಗೆ ದೂರವಾಣಿ ಕರೆ ಮಾಡಿದ್ದರು. ನಿನ್ನೆ ಪವಿತ್ರ ಸಂಸತ್ ಭವನದ ಕಾಂಪ್ಲೆಕ್ಸ್ನಲ್ಲಿ ಸಂಸದರು ಮಾಡಿದ ಅಪಹಾಸ್ಯಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದರು. ಕಳೆದ ಇಪ್ಪತ್ತು ವರ್ಷಗಳಿಂದ ಇಂತಹ ಅವಮಾನಗಳನ್ನು ಅನುಭವಿಸುತ್ತಿದ್ದೇನೆ ಎಂದು ತಿಳಿಸಿದರು. ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಗೆ ಇದು ಸಂಭವಿಸಬಹುದು. ಅದು ಸಂಸತ್ತಿನಲ್ಲಿಯೂ ಸಂಭವಿಸಬಹುದು, ಇದು ದುರದೃಷ್ಟಕರವಾಗಿದೆ ಎಂದರು.
ಆಗ ನಾನು ಅವರಿಗೆ ಹೇಳಿದೆ. ಮಿಸ್ಟರ್ ಪ್ರಧಾನ ಮಂತ್ರಿ.. ಕೆಲವರು ಮಾಡುವ ಚೇಷ್ಟೆಗಳು ನನ್ನ ಕರ್ತವ್ಯವನ್ನು ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ವಗಳನ್ನ ಎತ್ತಿಹಿಡಿಯೋದನ್ನು ತಡೆಯಲು ಸಾಧ್ಯವಿಲ್ಲ. ಹೃದಯಾಳದಿಂದ ನಾನು ಬದ್ಧನಾಗಿದ್ದೇನೆ ಎಂದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ರಾಜ್ಯಸಭೆಯಲ್ಲಿ ಮಾತನಾಡಿರುವ ಅವರು.. ಒಬ್ಬ ಸಂಸದರು ಮತ್ತೊಬ್ಬರು ನನ್ನನ್ನು ಅಪಹಾಸ್ಯ ಮಾಡುವುದನ್ನು ರೆಕಾರ್ಡ್ ಮಾಡುವುದನ್ನು ನೋಡಿದಾಗ ನನ್ನ ಹೃದಯದಲ್ಲಿ ಏನಾಗುತ್ತದೆ ಎಂದು ನಿಮಗೆ ತಿಳಿದಿಲ್ಲ. ನೀವು ನನ್ನ ರೈತ ಹಿನ್ನಲೆ ಮತ್ತು ಜಾಟ್ ಸಮುದಾಯವನ್ನು ಅವಮಾನಿಸಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದ್ದರು.