ನಟ ಹಾಗೂ ರಾಜಕಾರಣಿ ವಿಜಯಕಾಂತ್ ಅವರಿಗೆ ಮರಣೋತ್ತರ ಪದ್ಮಭೂಷಣ ಪ್ರಶಸ್ತಿಯ ಗೌರವ ಸಂದಿದೆ. ಈ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಭಾವನಾತ್ಮಕ ವಿಡಿಯೋವೊಂದನ್ನು ಮಾಡಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮಗೆ ಆಪ್ತ ಸ್ನೇಹಿತರಾಗಿದ್ದ ವಿಜಯಕಾಂತ್ ಅವರ ಸಾಧನೆಗಳನ್ನು ರಜನಿಕಾಂತ್ ಸ್ಮರಿಸಿಕೊಂಡಿದ್ದು, ಆತ್ಮೀಯ ಸ್ನೇಹಿತನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ರಜನಿ ವಿಡಿಯೋದಲ್ಲಿ ಹೇಳಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಕೇಂದ್ರ ಸರ್ಕಾರವು 2024 ರ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಹೀಗಾಗಿ ದಿವಂಗತ ನಟ ವಿಜಯಕಾಂತ್ ಅವರಿಗೆ ಮೇ 9, 2024 ರಂದು ಮರಣೋತ್ತರವಾಗಿ ಪದ್ಮಭೂಷಣ ಗೌರವವನ್ನು ನೀಡಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜಯಕಾಂತ್ ಅವರ ಪತ್ನಿ ಪ್ರೇಮಲತಾ ವಿಜಯಕಾಂತ್ ಅವರಿಗೆ ಗೌರವಾನ್ವಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ನಟ ವಿಜಯಕಾಂತ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿರುವುದಕ್ಕೆ ಅನೇಕ ಸೆಲೆಬ್ರಿಟಿಗಳು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಈ ಸಂದರ್ಭದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
“ಕೇಂದ್ರ ಸರ್ಕಾರವು ದಿವಂಗತ ನಟ ಮತ್ತು ನನ್ನ ಸ್ನೇಹಿತ ವಿಜಯಕಾಂತ್ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿದೆ. ಇದು ಸಂತೋಷದ ಕ್ಷಣ. ವಿಜಯಕಾಂತ್ ಅವರ ಇತಿಹಾಸವು 2024ರ ಪದ್ಮ ಪ್ರಶಸ್ತಿಯ ದಾಖಲೆಗಳಲ್ಲಿ ಸೇರ್ಪಡೆಯಾಗುತ್ತಿದೆ. ಇದು ಅವರಿಗೂ ದೊಡ್ಡ ಗೌರವವಾಗಿದೆ” ಎಂದಿದ್ದಾರೆ.
“ವಿಜಯಕಾಂತ್ ನಮ್ಮೊಂದಿಗಿಲ್ಲ ಎಂಬುದು ನನ್ನ ಮನಸ್ಸಿಗೆ ಅತೀವ ನೋವಿನ ಸಂಗತಿ. ಅವರು ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಿ ನಮ್ಮೆಲ್ಲರಿಂದ ದೂರವಾದರು. ಅವರಂಥ ಮತ್ತೊಬ್ಬ ವ್ಯಕ್ತಿ ಸಿಗಲಾರರು. ನಾನು ಅವನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ನಿಜವಾದ ಮಧುರೈ ವೀರನ್ ಎಂದು ರಜನಿಕಾಂತ್ ಸ್ನೇಹಿತನನ್ನು ಕೊಂಡಾಡಿದ್ದಾರೆ.