ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಎಂಡ್ ಗ್ಯಾಂಗ್ ಜೈಲು ಸೇರಿ ತಿಂಗಳು ಕಳೆದಿದೆ. ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ಹೊರ ತರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರನ್ನು ಬಿಡಿಸಿಕೊಂಡು ಬರಲು ಟೊಂಕ ಕಟ್ಟಿ ನಿಂತಿದ್ದಾರೆ. ಇದೇ ಕಾರಣಕ್ಕೆ ಆಗಾಗ ಜೈಲಿಗೆ ಭೇಟಿ ನೀಡಿದ ದರ್ಶನ್ ಅವರ ಜೊತೆ ಈ ವಿಚಾರವಾಗಿ ಚರ್ಚೆ ನಡೆಸುತ್ತಿದ್ದಾರೆ. ಅಂತೆಯೇ ನಿನ್ನೆ ಕೂಡ ದೀನಕರ್ ಜೊತೆ ತೆರಳಿ ದರ್ಶನ್ ಜೊತೆ ಮಾತುಕತೆ ಮಾಡಿಕೊಂಡು ಬಂದಿದ್ದಾರೆ. ಈ ಮಧ್ಯೆ ದರ್ಶನ್ ಪರ ವಕೀಲರು ದರ್ಮಸ್ಥಳದ ಮಂಜುನಾಥನ ಮೊರೆ ಹೋಗಿದ್ದಾರೆ.
ದರ್ಶನ್ ಪರ ವಕೀಲ ದರ್ಶನ್ ಬಿಡುಗಡೆಗಾಗಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಮೊರೆ ಹೋಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ತನಿಖೆ ಮುಂದುವರಿಸಿದ್ರೆ, ಇತ್ತ ದರ್ಶನ್ ಅವರನ್ನು ಹೇಗಾದರು ಮಾಡಿ ಹೊರ ತರಬೇಕು ಎಂದು ದರ್ಶನ್ ಪರ ವಕೀಲ ಧರ್ಮಸ್ಥಳ ಶ್ರೀ ಮಂಜುನಾಥನ ಮೊರೆ ಹೋಗಿದ್ದಾರೆ. ನಿನ್ನೆ ಧರ್ಮಸ್ಥಳಕ್ಕೆ ದರ್ಶನ್ ಪರ ವಕೀಲ ನಾರಾಯಣ ಸ್ವಾಮಿ ಮತ್ತು ತಂಡ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಬಿಡುಗಡೆಗೆ ದಾರಿ ತೋರಿಸು ಅಂತ ಬೇಡಿಕೊಂಡಿದ್ದಾರೆ.
ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸ್ನೇಹಿತೆ ಸಮತಾಳನ್ನ ಮತ್ತೆ ವಿಚಾರಣೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆಗೆ ಎಲೆಕ್ಟ್ರಿಕ್ ಶಾಕ್ ಡಿವೈಸ್ ಬಳಸಿದ್ದರು ಎನ್ನಲಾಗ್ತಿದೆ. ಈ ಎಲೆಕ್ಟ್ರಿಕ್ ಶಾಕ್ ಡಿವೈಸ್ ಖರೀದಿಗೆ ಸಮತಾ ಹಣ ನೀಡಿದ್ದರು ಎಂದು ತಿಳಿದು ಬಂದಿದ್ದು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಮತಾಗೆ ಪೊಲೀಸರು ನೋಟಿಸ್ ನೀಡಿ ಎರಡನೇ ಬಾರಿ ವಿಚಾರಣೆ ನಡೆಸಿದ್ದಾರೆ.
ಇನ್ನು, ಜೈಲಿನಲ್ಲಿರುವ ಪವಿತ್ರಾ ಗೌಡ ತಂದೆ ತಾಯಿ ಹಾಗೂ ಸಂಬಂಧಿಕರು ಕೂಡ ಜೈಲಿಗೆ ಭೇಟಿ ನೀಡಿದ್ದಾರೆ. ಸುಮಾರು ಒಂದು ತಿಂಗಳಿನಿಂದ ಪೊಲೀಸ್ ಕಸ್ಟಡಿಯಲ್ಲಿರುವ ಪವಿತ್ರಾ ಗೌಡ ಆರೋಗ್ಯ ಹದಗೆಟ್ಟಿದ್ದು, ಮಗಳ ಆರೋಗ್ಯದ ಬಗ್ಗೆ ತಂದೆ ತಾಯಿ ಮಾಹಿತಿ ಪಡೆದಿದ್ದಾರೆ. ಇನ್ನು, ಜೈಲಿಗೆ ಬಂದ ತಾಯಿಯನ್ನು ನೋಡುತ್ತಿದ್ದಂತೆ ಪವಿತ್ರಾ ಕಣ್ಣೀರಿಟ್ಟಿದ್ದಾಳೆ. ಜೈಲೂಟ ಒಗ್ಗುತ್ತಿಲ್ಲ ನಿದ್ರೆ ಬರುತ್ತಿಲ್ಲ ಎಂದು ಗಳಗಳನೆ ಕಣ್ಣೀರಿಟ್ಟಿದ್ದಾಳೆ. ನಾಳೆ ದರ್ಶನ್ ಅವರ ಕಸ್ಟಡಿ ಅಂತ್ಯವಾಗಲಿದ್ದು ಮುಂದೆ ಏನಾಗಲಿದೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲು ಶುರುವಾಗಿದೆ.