ವಿಜಯಪುರ:- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮದರಿ ಗ್ರಾಮದಲ್ಲಿ ಮಹೊರಂ ಹಬ್ಬದ ಹಿನ್ನೆಲೆಯಲ್ಲಿ ಕೆಂಡ ಹಾಯುವಾಗ ಇಲ್ಲೊಬ್ಬ ವ್ಯಕ್ತಿ ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತುಕೊಂಡು ದೇವರಿಗೆ ಶಿರಬಾಗಿ ನಮಿಸಿದ್ದಾರೆ.
ಮೊಹರಂ ಹಬ್ಬದ ನಿಮಿತ್ಯ ಆಚರಣೆ ಮಾಡಲಾಗುವ ಗಂಧ ರಾತ್ರೀ ಹಬ್ಬದಲ್ಲಿ ವಿಚಿತ್ರ ಘಟನೆ ಕಂಡುಬಂದಿದೆ. ಮೊಹರಂ ನಿಮಿತ್ಯ ಬೆಂಕಿ ಹಾಯೋದು ವಾಡಿಕೆಯಿದೆ. ನಮ್ಮ ರಾಜ್ಯ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ಮೊಹರಂ ಹಬ್ಬದ ನಿಮಿತ್ತ ಬೆಂಕಿ ಕೆಂಡವನ್ನು ಹಾಯುತ್ತಾರೆ. ಆದರೆ, ಇಲ್ಲೊಬ್ಬ ಭಕ್ತ ಬೆಂಕಿ ಕೆಂಡದಲ್ಲಿಯೇ ಕಂಬಳಿ ಹಾಸಿ ಕುಳಿತು ಅಲ್ಲಿಯೇ ಶಿರಬಾಗಿ ದೇವರಿಗೆ ನಮಿಸಿದ್ದಾರೆ. ಹೀಗೆ ದೇವರಿಗೆ ಭಕ್ತಿ ಸಮರ್ಪಿಸಿದ ವ್ಯಕ್ತಿ ಯಲ್ಲಪ್ಪ ಹುಗ್ಗಿ ಎಂಬಾತ ಆಗಿದ್ದಾನೆ.
ಮೊಹರಂ ಹಬ್ಬದ ಗಂಧ ರಾತ್ರೀ ಸಂದರ್ಭದಲ್ಲಿ ದೊಡ್ಡ ದೊಡ್ಡ ಕಟ್ಟಿಗೆಗೆ ಬೆಂಕಿ ಹೊತ್ತಿಸಿ ಅದರಿಂದ ಕೆಂಡ ಮಾಡಲಾಗುತ್ತದೆ. ಬೆಂಕಿ ಕೆಂಡದ ಮೇಲೆ ಜನರು ಹಾದು ಹೋಗುವುದು ವಾಡಿಕೆ. ಆದರೆ, ಇದೇ ಬೆಂಕಿ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತು ಯಲ್ಲಪ್ಪ ಅಚ್ಚರಿ ಮೂಡಿಸಿದ್ದಾರೆ. ಆದರೆ, ಪುನಃ ಈ ರೀತಿಯಾಗಿ ಬೇರೆ ಯಾರನ್ನೂ ಮಾಡಲು ಬಿಡದೇ ಗ್ರಾಮಸ್ಥರು ತಡೆದಿದ್ದಾರೆ. ಉಳಿದಂತೆ ಹಲವು ಭಕ್ತರು ಮೊಹರಂ ಹಬ್ಬದ ನಿಮಿತ್ತು ಬೆಂಕಿ ಕೊಂಡವನ್ನು ಹಾಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದ್ದಾರೆ.