ವಿಜಯಪುರ: ಸ್ವಾಮೀಜಿಗಳು ಸರ್ಕಾರಕ್ಕೆ ಮುಜುಗರವಾಗುವಂತೆ ಹೋರಾಟ ಮಾಡಬಾರದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಚಿವೆಯಾಗಿ ಸಮಾಜದ ಋಣ ತೀರಿಸದಿದ್ದರೆ ಮನುಷ್ಯತ್ವ ಅಲ್ಲ. ನಾನು ನಿರಂತರವಾಗಿ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಕೆಲ ಹೋರಾಟಗಳ ದಿನಾಂಕ ಹೊಂದಾಣಿಕೆಯಾಗದ ಕಾರಣ ಹೋಗಿಲ್ಲ. ಸಮಾಜ ಬಿಟ್ಟು ನಾನಿಲ್ಲ. ನನ್ನ ಬಿಟ್ಟು ಸಮಾಜವಿಲ್ಲ ಎಂದರು.
ಪಂಚಮಸಾಲಿ ಹೋರಾಟ ಪಕ್ಷತೀತವಾದ ಹೋರಾಟ. ಇದರಲ್ಲಿ ರಾಜಕಾರಣ ಇಲ್ಲ. ನಾನೂ ಹೋರಾಟದ ಮುಂಚೂಣಿಯಲ್ಲಿದ್ದು ಹೋರಾಟ ಮಾಡಿದ್ದೆ. ಈಗಲೂ ಹೋರಾಟ ಮಾಡುತ್ತಿದ್ದೇನೆ. ಪಕ್ಷಾತೀತವಾಗಿ ಯಾವುದೇ ಸರ್ಕಾರದ ವಿರುದ್ದ ಅಲ್ಲ. ಸಮಾಜಕ್ಕೆ ನ್ಯಾಯ ಕೊಡಬೇಕೇಂದು ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ ಒಡಕು ಇಲ್ಲ ಎಂದು ಹೇಳಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಉಗ್ರ ಹೋರಾಟ ಮಾಡಿ ಈಗ ಹೋರಾಟ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲಿನಂತೆ ಹೋರಾಟವಿದೆ. ಸಚಿವೆಯಾದ ಕಾರಣ ಕೆಲಸಗಳ ಒತ್ತಡವಿರುವುದರಿಂದ ಕೆಲ ಹೋರಾಟದಲ್ಲಿ ಭಾಗಿಯಾಗಿಲ್ಲ. ಕೆಲ ಹೋರಾಟಗಳಿಗೆ ನನ್ನ ಸಹೋದರ ಹಾಗೂ ಪುತ್ರನನ್ನು ಕಳುಹಿಸಿದ್ದೇನೆ ಎಂದರು.