ಮಂಡ್ಯ :- ಬಾಡಿಗೆ ಮನೆಯಲ್ಲಿ ನಡೆಯುತ್ತಿರುವ ಸರ್ಕಾರಿ ಶಾಲೆಗೆ ಎಸ್.ಡಿ.ಎಂ.ಸಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕನಿಷ್ಠ ಪಕ್ಷ ಬಾಡಿಗೆ ಹಣವನ್ನು ಸಹ ನೀಡದೇ ಬೇಜವಾಬ್ದಾರಿತನ ತೋರಿದ್ದು, ಇದರಿಂದ ಗ್ರಾಮಸ್ಥರು ಭಿಕ್ಷೆ ಎತ್ತಿ ಸರ್ಕಾರಿ ಶಾಲೆ ನಡೆಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮದ್ದೂರು ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗರಲಿಂಗನದೊಡ್ಡಿ ಗ್ರಾಮದ ಸರ್ಕಾರಿ ಶಾಲಾ ಮಕ್ಕಳ ದುಸ್ಥಿತಿ ಇದು. 2017ರಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯೂ ಶಾಲಾ ಆವರಣದಲ್ಲೇ ಹಾದು ಹೋದ ಪರಿಣಾಮ ಎರಡು ಶಾಲಾ ಕಟ್ಟಡಗಳು ನೆಲಸಮಗೊಂಡ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಬಾಡಿಗೆ ಹೆಂಚಿನ ಮನೆಯಲ್ಲಿ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಯಿತು.
ಶಾಲಾ ಕಟ್ಟಡ ಹಾಗೂ ಆವರಣ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಹಾರವಾಗಿ ಅಂದಾಜು 68 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿತು. ಹಣ ಬಿಡುಗಡೆಯಾಗಿ ಎಸ್.ಡಿ.ಎಂ.ಸಿ ಖಾತೆಗೆ 68 ಲಕ್ಷ ರೂ ಜಮೆಯಾಗಿದ್ದು, ಈಗ ಅಂದಾಜು 75 ಲಕ್ಷ ರೂ ಖಾತೆಯಲ್ಲಿದೆ. ಬಳಿಕ ಗ್ರಾಮಸ್ಥರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ರಸ್ತೆ ಜಾಗ ಬಿಟ್ಟು ಇನ್ನುಳಿದ ಶಾಲಾ ಆವರಣದಲ್ಲಿ ಕಟ್ಟಡ ನಿರ್ಮಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರೇ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಅಷ್ಟು ಜಾಗದಲ್ಲಿ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿತ್ತು. ನಂತರ ಗ್ರಾಮಸ್ಥರೇ ತಮ್ಮ ಸ್ವಂತ ಜಾಗ ನೀಡುತ್ತೇವೆ ಜಾಗಕ್ಕೆ ಇಂತಿಷ್ಟು ಹಣ ನೀಡುವಂತೆ ಅಧಿಕಾರಿಗಳಿಗೆ ಹೇಳಿದರೇ. ಶಾಲಾ ಕಟ್ಟಡಕ್ಕೆ ಉಚಿತವಾಗಿ ಜಾಗ ನೀಡುವಂತೆ ಅಧಿಕಾರಿಗಳು ಗ್ರಾಮಸ್ಥರಿಗೆ ಹೇಳುತ್ತಿದ್ದಾರೆ. ಅಧಿಕಾರಿಗಳು ಮತ್ತು ಗ್ರಾಮಸ್ಥರ ಹೊಂದಾಣಿಕೆ ಕೊರತೆಯಿಂದಾಗಿ ಮಕ್ಕಳು ಮಾತ್ರ ಅತಂತ್ರ ಸ್ಥಿತಿಯಲ್ಲಿ ವಿಧ್ಯಾಭ್ಯಾಸದಲ್ಲಿ ಮಾತ್ರ ತೊಡಗಿರುವುದು ನಿಜಕ್ಕೂ ದುರಂತವಾಗಿದೆ.
ಈ ಗ್ರಾಮದಲ್ಲಿ ಒಟ್ಟು 300 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬಹುತೇಕ ಎಲ್ಲರೂ ಕೂಲಿ ಮಾಡಿ ಬದುಕುತ್ತಿರುವ ಬಡ ಜನರೇ ಹೆಚ್ಚು ಹೀಗಿರುವಾಗ ಎಷ್ಟೋ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಇಲ್ಲ ಎಂದು ಶಾಲೆಗೆ ಬೀಗ ಹಾಕುತ್ತಿರುವ ಇಂಥ ಕಾಲದಲ್ಲಿ ಈ ಶಾಲೆಗೆ ಮಕ್ಕಳ ಹಾಜರಾತಿ ಹೆಚ್ಚಾಗುತ್ತಿದೆ. ಆದರೆ ಸರ್ಕಾರ ಮಾತ್ರ ಶಾಲೆಗೆ ಬೇಕಾದ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ. ಈ ಶಾಲೆಗೆ ಕಟ್ಟಡವಿಲ್ಲ, ತರಗತಿ ಮಾಡಲು ಕೊಠಡಿ ಇಲ್ಲಾ, ಊಟದ ಕೋಣೆ ಇಲ್ಲ. ಆಟದ ಮೈದಾನವೂ ಇಲ್ಲ ಆಟ ಹೇಳಿಕೊಡಲು ಶಿಕ್ಷಕರೂ ಇಲ್ಲಾ. ಮಕ್ಕಳಿಗೆ ಶೌಚಾಲಯವಿಲ್ಲದೇ ಬಯಲನ್ನೇ ಆಶ್ರಯಿಸಿವೆ. ಇದೆಲ್ಲದಕ್ಕಿಂತ ದುರಂತ ಎಂದರೆ ಒಂದೇ ಕೊಠಡಿಯಲ್ಲಿ ಐದು ತರಗತಿಗಳು ನಡೆಯುತ್ತಿವೆ ಅನ್ನೋದನ್ನ ನೀವು ಊಹೆ ಮಾಡಿಕೊಳ್ಳೋದು ಕೂಡಾ ಅಸಾಧ್ಯದ ಮಾತು. ಇಂಥ ದುಸ್ಥಿತಿಯಲ್ಲಿದ್ದರು ಮಕ್ಕಳು ಮಾತ್ರ ಶಾಲೆಗೆ ಬಂದು ಕಲಿಕೆಯಲ್ಲಿ ತೊಡಗಿದ್ದಾರೆ.
ಈ ಗ್ರಾಮದ ಜನರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಿ ಓದಿಸುವಷ್ಟು ಆರ್ಥಿಕವಾಗಿ ಬಲಾಢ್ಯರು ಅಲ್ಲ. ಹಾಗಾಗಿಯೇ ಗ್ರಾಮಸ್ಥರು ಶಾಸಕ ಡಿ.ಸಿ.ತಮ್ಮಣ್ಣ ಮತ್ತು ಸಂಸದೆ ಸುಮಲತಾ ಅಂಬರೀಶ್, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡರ ಬಳಿಯೂ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಆದರೆ, ಜನಪ್ರತಿನಿಧಿಗಳ ಮುಂದೆ ಅಂಗಲಾಚಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಯ ಪರಿಹಾರ ಹಣವಿದ್ದರೂ ಖರ್ಚು ಮಾಡಿ ಕಟ್ಟಡಗಳ ನಿರ್ಮಾಣ ಮಾಡುತ್ತಿಲ್ಲ. ಕನಿಷ್ಠ ಕನಿಕರವನ್ನು ಯಾರೂ ತೋರಿಸಿಲ್ಲ. ಪರಿಣಾಮ ಇನ್ನೂ ಈ ಹಿಂದೆ 35 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಕ್ಕಳು ಕೂಡಾ ಅಕ್ಕಪಕ್ಕದ ಗ್ರಾಮದ ಶಾಲೆಗಳಿಗೆ ದಾಖಲಾಗಿದ್ದಾರೆ. ಪ್ರಸ್ತುತ 1 ರಿಂದ 5 ತರಗತಿ ನಡೆಯುತ್ತಿದ್ದು, 18 ಮಕ್ಕಳಿಗೆ ಒಬ್ಬರೇ ಶಿಕ್ಷಕಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ.
ಕನಿಷ್ಠ ಪಕ್ಷ ಬಾಡಿಗೆ ಹಣ ನೀಡಲು ಸಹ ಎಸ್.ಡಿ.ಎಂ.ಸಿ ಖಾತೆಯಲ್ಲಿರುವ ಹಣವನ್ನು ತೆಗೆಯುವುದಕ್ಕೂ ಅಧಿಕಾರಿಗಳು ಬಿಡುತ್ತಿಲ್ಲ. ಪ್ರತಿ ತಿಂಗಳು ಬಾಡಿಗೆ ಮನೆಗೆ ಎರಡು ಸಾವಿರ ರೂಪಾಯಿ ಕೊಡಬೇಕು. ಇಲ್ಲಿಯವರೆಗೂ ಗ್ರಾಮಸ್ಥರೇ ಕೊಡ್ತಾ ಇದ್ದೆವು. ಈಗ ನಮ್ಮ ಕೈಯಲ್ಲಿ ಪ್ರತಿ ತಿಂಗಳು ಹಣ ನೀಡೋಕೆ ಆಗುತ್ತಿಲ್ಲ. ಹೀಗಾಗಿ ಅಲ್ಲಿ ಇಲ್ಲಿ ಭಿಕ್ಷೆ ಎತ್ತಿ ಹಣ ಕೊಡ್ತಿದ್ದೇವೆ. ಶಿಕ್ಷಣ ಕ್ಷೇತ್ರಕ್ಕೆ ಶಾಸಕ ಡಿ.ಸಿ.ತಮ್ಮಣ್ಣ ಅವರು ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಸಾಕಷ್ಟು ಶೈಕ್ಷಣಿಕ ಪ್ರಗತಿ ಸಾಧಿಸಿದ್ದಾರೆ ಆದರೆ, ನಮ್ಮೂರಿನ ಶಾಲೆಯ ಅಭಿವೃದ್ಧಿಗೆ ಯಾಕೋ ಮುತುವರ್ಜಿ ವಹಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಸತೀಶ್ ಮತ್ತಿತರರು ಬೇಸರ ವ್ಯಕ್ತಪಡಿಸಿದರು.
ಇಂತ ದುಸ್ಥಿತಿಯಲ್ಲಿ ಮಕ್ಕಳು ಶಾಲೆಯಲ್ಲಿ ಪಾಠ ಕಲಿಯೋದಾದರೂ ಹೇಗೆ ಅನ್ನೋದು ದೊಡ್ಡ ಪ್ರಶ್ನೆ. ನಿಜಕ್ಕೂ ಮನುಷ್ಯತ್ವ ಇರೋ ಅಧಿಕಾರಿಗಳು ಯಾರಾದರೂ ಶಿಕ್ಷಣ ಇಲಾಖೆಯಲ್ಲಿ ಇದ್ದಿದ್ದರೆ ಮಕ್ಕಳಿಗೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಈಗಲಾದರೂ ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಮುಂಬರುವ ಶೈಕ್ಷಣಿಕ ವರ್ಷಕ್ಕೆ ಈ ಮಕ್ಕಳಿಗೆ ಶಾಲೆಯಲ್ಲಿ ಪಾಠ ಕಲಿಯುವ ವಾತಾವರಣ ನಿರ್ಮಾಣ ಮಾಡಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಶೇಷ ವರದಿ : ಗಿರೀಶ್ ರಾಜ್ ಮಂಡ್ಯ