ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟ ಕೂಡ ಸಂಪೂರ್ಣ ಭರ್ತಿಯಾಗಿದೆ. ಈಗಾಗಲೇ ಎಲ್ಲಾ ಸಚಿವರಿಗೆ ಖಾತೆ ಕೂಡ ಹಂಚಿಕೆ ಮಾಡಲಾಗಿದ್ದು, ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ ಧಾರವಾಡ ಜಿಲ್ಲೆಯ ಉಸ್ತುವಾರಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೇ ನೀಡಬೇಕು ಎಂಬ ಒತ್ತಡವನ್ನು ವಿನಯ್ ಕುಲಕರ್ಣಿ ಅವರು ವರಿಷ್ಠರ ಮೇಲೆ ಹೇರುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಈಗಾಗಲೇ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂತೋಷ ಲಾಡ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಸಂತೋಷ ಲಾಡ್ ಅವರಿಗೆ ಕಾರ್ಮಿಕ ಇಲಾಖೆಯ ಜವಾಬ್ದಾರಿ ಸಹ ನೀಡಲಾಗಿದೆ. ಆದರೆ, ಧಾರವಾಡ ಜಿಲ್ಲಾ ಉಸ್ತುವಾರಿಯನ್ನು ಅವರಿಗೆ ಇನ್ನೂ ವಹಿಸಿಲ್ಲ. ಹೀಗಿರುವಾಗ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ವಹಿಸಬೇಕು ಎಂಬ ಒತ್ತಾಯವನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಲಕ್ಷ್ಮೀ ಹೆಬ್ಬಾಳಕರ ಪ್ರಬಲ ಲಿಂಗಾಯತ ನಾಯಕಿಯಾಗಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಲಿಂಗಾಯತ ಮತಗಳನ್ನು ಒಗ್ಗೂಡಿಸುವ ಸಲುವಾಗಿ ಹೆಬ್ಬಾಳಕರ ಅವರಿಗೆ ಈ ಭಾಗದ ಉಸ್ತುವಾರಿ ನೀಡಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಲಕ್ಷ್ಮೀ ಹೆಬ್ಬಾಳಕರ ಅವರಿಗೆ ವಿನಯ್ ಕುಲಕರ್ಣಿ ಅಕ್ಕಾ ಎಂದೇ ಕರೆಯುತ್ತಾರೆ. ವಿನಯ್ ಕುಲಕರ್ಣಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರ ಮಧ್ಯೆ ಉತ್ತಮ ಒಡನಾಟವಿದ್ದು, ಹೀಗಾಗಿ ವಿನಯ್ ಕುಲಕರ್ಣಿಯವರು ಹೆಬ್ಬಾಳಕರ ಅವರಿಗೇ ಧಾರವಾಡ ಉಸ್ತುವಾರಿ ಜವಾಬ್ದಾರಿ ವಹಿಸಬೇಕು ಎಂದು ಕಾಂಗ್ರೆಸ್ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ ವಹಿಸುತ್ತಾರೋ ಕಾದು ನೋಡಬೇಕಿದೆ.