ಧಾರವಾಡ: ವಿನಯ್ ಕುಲಕರ್ಣಿ ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಸಾಕಷ್ಟು ಪ್ರಯತ್ನಗಳು ನಡೆದವು. ಆದರೆ, ಅವರು ರಾಜಕೀಯವಾಗಿ ಮತ್ತೆ ಪುಟಿದೇಳುತ್ತಾರೆ ಎಂದು ಕೆಪಿಸಿಸಿ ವಕ್ತಾರ ನಿಖೇತರಾಜ್ ಮೌರ್ಯ ಹೇಳಿದರು.
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪರವಾಗಿ ನಡೆದು ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣೆ ಬಂದಾಗ ಬಿಜೆಪಿಯವರು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಪ್ರತಿವರ್ಷ ನಮಗೇ ಗೊತ್ತಿಲ್ಲದೇ ನಮ್ಮ ಜೇಬಿಂದ ಒಂದೂವರೆ ಲಕ್ಷ ರೂಪಾಯಿ ಟ್ಯಾಕ್ಸ್ ವಸೂಲಿ ಮಾಡುತ್ತಿದ್ದಾರೆ. ಇದೇ ಹಣ ನಮಗೆ ಕೊಟ್ಟು ಚುನಾವಣೆ ಮಾಡುತ್ತಿದ್ದಾರೆ. ಜನ ಇದನ್ನು ಪ್ರಶ್ನೆ ಮಾಡಬೇಕು. ವಿನಯ್ ಕುಲಕರ್ಣಿ ಈ ಭಾಗದ ದೊಡ್ಡ ನಾಯಕರು. ಅವರನ್ನು ಎಷ್ಟೇ ಹತ್ತಿಕ್ಕಲು ಪ್ರಯತ್ನಿಸಿದರೂ ಅವರು ಮತ್ತೆ ಮತ್ತೆ ಪುಟಿದೇಳುತ್ತಾರೆ ಎಂದರು.
ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಮಾತನಾಡಿ, ಈ ಭಾಗದ ಯುವಕರಿಗೆ ಉದ್ಯೋಗ ಸಿಗಬೇಕು ಎಂಬ ಉದ್ದೇಶದಿಂದ ಮಾರ್ಕೊಪೊಲೊದಂತಹ ಕಂಪೆನಿಗಳನ್ನು ತಂದು ಈ ಭಾಗದ ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸವನ್ನು ವಿನಯ್ ಕುಲಕರ್ಣಿ ಅವರು ಮಾಡಿದರು. ಐದು ವರ್ಷ ಬಿಜೆಪಿ ಅಭ್ಯರ್ಥಿಯ ಕೆಲಸವನ್ನೂ ನೀವು ನೋಡಿದ್ದೀರಿ, ವಿನಯ್ ಕುಲಕರ್ಣಿ ಅವರ ಕೆಲಸವನ್ನೂ ನೋಡಿದ್ದೀರಿ. ಈ ಭಾಗದಲ್ಲಿ ಹೆದರಿಸುವ ಬೆದರಿಸುವ ಕೆಲಸ ನಡೆದಿದೆ. ಯಾರೂ ಹೆದರುವ ಅಗತ್ಯವಿಲ್ಲ. ಈ ಬಾರಿ ವಿನಯ್ ಕುಲಕರ್ಣಿ ಅವರನ್ನು ಬೆಂಬಲಿಸಿದ್ದೇ ಆದಲ್ಲಿ ಯುವಕರಿಗೆ ಉಜ್ವಲ ಭವಿಷ್ಯವಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ ಮಾತನಾಡಿ,ವಿನಯ ಕುಲಕರ್ಣಿಯವರ ಪರವಾಗಿ,ನಮ್ಮೆಲ್ಲ ಕಾರ್ಯಕರ್ತರು,ಅಭಿಮಾನಿಗಳು ಮನೆಗೊಬ್ಬ ವಿನಯ ಕುಲಕರ್ಣಿಯಾಗಿ,ನಾನೇ ಅಭ್ಯರ್ಥಿ ನಾನೇ ವಿನಯ ಕುಲಕರ್ಣಿ ಎಂದು ನಿರ್ಧರಿಸಿ,ಅವರು ಮಾಡಿದ ಅಭಿವೃಧ್ಧಿಯನ್ನು ಮನೆ ಮನೆಗೆ ತಲುಪಿಸಿ ಗೆಲ್ಲಿಸಬೇಕು ಎಂದು ಕರೆ ನೀಡಿದರು. ಈ ಸಂಧರ್ಭದಲ್ಲಿ,ಮಡಿವಾಳಪ್ಪ ಉಳವನ್ನವರ,ಮಡಿವಾಳಗೌಡ ಪಾಟೀಲ,ಭೀಮಣ್ಣ ಕಾಸಾಯಿ,ರುದ್ರಪ್ಪ ಉಳವನ್ನವರ,ಅರ್ಜುನ ಬಳ್ಳಾರಿ ಸೇರಿದಂತೆ ಕಾಂಗ್ರೆಸ್ನ ಅನೇಕ ಮುಖಂಡರು ಉಪಸ್ಥಿತರಿದ್ದರು