ಇಂಫಾಲ್: ಅಂದು ನೆರೆಹೊರೆಯ ಮನೆಗಳಿಗೆಲ್ಲಾ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು, ನನ್ನ ಮನೆಗೂ ಬೆಂಕಿ ಬಿದ್ದಿತ್ತು. ಇಬ್ಬರು ಮಕ್ಕಳನ್ನ ಬೆನ್ನಿಗೆ ಕಟ್ಟಿಕೊಂಡು, ಸೊಸೆ, ನಾದಿನಿಯನ್ನ ಕರೆದುಕೊಂಡು ಬೆಂಕಿಬಿದ್ದ ಮನೆಯಿಂದ ತಪ್ಪಿಸಿಕೊಂಡು ಓಡುತ್ತಿದೆ. ವೇಗವಾಗಿ ಓಡುತ್ತಿದ್ದರಿಂದ ಕಾಲು ತಡವರಿಸಿ ಎಡವಿ ಬಿದ್ದೆ. ಅಷ್ಟರಲ್ಲಿ ಯಮಸ್ವರೂಪಿಗಳಂತೆ ಬಂದ ದುಷ್ಕರ್ಮಿಗಳು ನನ್ನನ್ನ ಹಿಡಿದು ಎಳೆದಾಡಿ, ಮನಸ್ಸೋ ಇಚ್ಚೆ ಎಳೆದಾಡಿದ್ರು, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ರು. ಇದು ಮಣಿಪುರದ ಸಂಘರ್ಷದಲ್ಲಿ (Manipur Violence) ಸಿಕ್ಕಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆ ಕಹಿ ಅನುಭವವನ್ನು ಬಿಚ್ಚಿಟ್ಟ ಪರಿ.
ಮಣಿಪುರದಲ್ಲಿ (Manipur) ಜನಾಂಗೀಯ ಘರ್ಷಣೆ ನಡೆಯುತ್ತಿದ್ದು ಮಹಿಳಾ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪರಿಹಾರ ಶಿಬಿರದಲ್ಲಿ ವಾಸಿಸುತ್ತಿರುವ ಮಹಿಳೆಯರು ಆಘಾತಕಾರಿ ಘಟನೆಗಳಲ್ಲಿ ತಾವು ಅನುಭವಿಸಿದ ಕಹಿ ಸತ್ಯಗಳನ್ನ ಬಿಚ್ಚಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಭಯಾಕನ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಹಾಗೂ ಅಧಿಕಾರಿಗಳು ಜನರಿಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ನೊಂದ ಜೀವಗಳು ಕಷ್ಟ ಹೇಳಿಕೊಳ್ಳಲು ಮುಂದೆ ಬರುತ್ತಿವೆ.
ಮಣಿಪುರದಲ್ಲಿ ಸಂಘರ್ಷ ಭುಗಿಲೇಳುತ್ತಿದ್ದಂತೆ ಹಲವು ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ದುಷ್ಕೃತ್ಯ ಎಸಗಿದ್ದರು. ಇಂತಹ ಸಂದರ್ಭದಲ್ಲಿ ಸುಟ್ಟು ಹೋದ ಮನೆಯಿಂದ 37ರ ವಿವಾಹಿತ ಮಹಿಳೆ ತನ್ನ ಇಬ್ಬರು ಮಕ್ಕಳು, ಸೊಸೆ ಮತ್ತು ನಾದಿನಿಯೊಂದಿಗೆ ಓಡಿ ಹೋಗುತ್ತಿದ್ದ ವೇಳೆ ಪುರುಷರಿಂದ ಗುಂಪಿಗೆ ಸಿಕ್ಕಿಬಿದ್ದು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
ನನ್ನ, ನನ್ನ ಕುಟುಂಬದ ಘನತೆ ಗೌರವ ಹಾಳಾಗುತ್ತದೆ, ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಘಟನೆಯನ್ನು ಬಹಿರಂಗಪಡಿಸಿರಲಿಲ್ಲ. ಸಾಮಾಜಿಕ ಕಳಂಕದಿಂದ ತಪ್ಪಿಸಿಕೊಳ್ಳೋದಕ್ಕಾಗಿ ಅತ್ಯಾಚಾರ ಆಗಿದ್ದರೂ ವಿಷಯವನ್ನ ಮುಚ್ಚಿಟ್ಟಿದೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದ್ದೆ. ಆದ್ರೆ ಕುಟುಂಬಸ್ಥರು ಧೈರ್ಯತುಂಬಿದ್ದರಿAದ ದೂರು ನೀಡುತ್ತಿದ್ದೇನೆ ಎಂದು ಬಿಷ್ಣುಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಮಹಿಳೆ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಸದ್ಯ ಸಂತ್ರಸ್ತ ಕುಟುಂಬಸ್ಥರು ಪರಿಹಾರ ಶಿಬಿರದಲ್ಲಿ ನೆಲೆಸಿದ್ದಾರೆ.
ಆ ಕರಳ ದಿನದಲ್ಲಿ ನಡೆದಿದ್ದೇನು?
ಮೇ 3 ರಂದು ಸಂಜೆ 6:30ರ ವೇಳೆ ದುಷ್ಕರ್ಮಿಗಳ ಗುಂಪೊಂದು ಆಕೆಯ ಮನೆ ಹಾಗೂ ನೆರೆಹೊರೆಯ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಆಗ ಅಲ್ಲಿಂದ ತಪ್ಪಿಸಿಕೊಳ್ಳಲು ಮುಂದಾದ ಮಹಿಳೆ ತನ್ನ ಇಬ್ಬರು ಮಕ್ಕಳು, ಸೊಸೆ ಮತ್ತು ನಾದಿನಿಯೊಂದಿಗೆ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಳು. ವೇಗವಾಗಿ ಓಡುತ್ತಿದ್ದ ವೇಳೆ ರಸ್ತೆಯಲ್ಲಿ ಎಡವಿ ಬಿದ್ದಿದ್ದಾಳೆ.
ಅಷ್ಟರಲ್ಲಿ ಸೊಸೆ ಇಬ್ಬರು ಗಂಡುಮಕ್ಕಳನ್ನು ಕರೆದುಕೊಂಡು ಓಡಿ ಹೋಗಿದ್ದಾಳೆ. ಆದ್ರೆ ಎಡವಿ ಬಿದ್ದ ಮಹಿಳೆ ಚೇತರಿಸಿಕೊಂಡು ಎದ್ದೇಳುತ್ತಿದ್ದಂತೆ ಐದಾರು ದುಷ್ಕರ್ಮಿಗಳು ಆಕೆಯನ್ನ ಹಿಡಿದು ಎಳೆದಾಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಆಕೆ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ, ಆಗ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಶೂನ್ಯ ಎಫ್ಐಆರ್ನಲ್ಲಿ ಹೇಳಿಕೆ ದಾಖಲಿಸಿದ್ದಾಳೆ.
ಶೂನ್ಯ ಎಫ್ಐಆರ್ ಅನ್ನು ಯಾವುದೇ ಪೊಲೀಸ್ ಠಾಣೆಯಲ್ಲಿ ಬೇಕಾದರೂ ದಾಖಲಿಸಬಹುದು. ಪ್ರಕರಣ ದಾಖಲಾದ ಪೊಲೀಸ್ ಠಾಣೆಯು ಎಫ್ಐಆರ್ ಅನ್ನು ಸರಿಯಾದ ನ್ಯಾಯವ್ಯಾಪ್ತಿಗೆ ಕಳುಹಿಸಬೇಕು, ನಂತರ ಅದನ್ನು ತನಿಖೆ ಮಾಡಲಾಗುತ್ತದೆ ಎಂದು ಚುರಚಂದಪುರದ ಪೊಲೀಸರು ತಿಳಿಸಿದ್ದಾರೆ.
ಇದುವರೆಗೆ ಮಣಿಪುರದಲ್ಲಿ ಸಾವಿರಾರು ಎಫ್ಐಆರ್ಗಳು ದಾಖಲಾಗಿದೆ. ಅದರಲ್ಲಿ ಒಂದೇ ಪ್ರಕರಣದ ಮೇಲೆ ಅನೇಕ ಝೀರೋ ಎಫ್ಐಆರ್ಗಳು ದಾಖಲಾಗಿವೆ. ಬೆಂಕಿ ಹಚ್ಚಿ ದಾಳಿ ಮಾಡಿರುವ ಸಂಬಂಧ 4,454 ಕೇಸ್, 4,148 ಲೂಟಿ ಕೇಸ್, ಮನೆ ಆಸ್ತಿ ನಾಶಕ್ಕೆ ಸಂಬಂಧಿಸಿದಂತೆ 4,694 ಕೇಸ್ ಹಾಗೂ ಸಾರ್ವಜನಿಕ ಆಸ್ತಿ ಹಾನಿಗೆ ಸಂಬಂಧಿಸಿದಂತೆ 584 ಕೇಸ್ಗಳು ದಾಖಲಾಗಿವೆ.