ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳು ಮುಂದುವರೆದಿದೆ. ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಅಂತರ್ ಜನಾಂಗೀಯ ಸಂಘರ್ಷದಿಂದ ಅಲ್ಲಿನ ಜನತೆ ತತ್ತರಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರು ದೆಹಲಿಯಲ್ಲಿ ರಾಜ್ಯದ ಪರಿಸ್ಥಿತಿ ಕುರಿತು ಸರ್ವಪಕ್ಷ ಸಭೆ ನಡೆಸಿದರು.
ಏತನ್ಮಧ್ಯೆ, ಸ್ಥಳೀಯರ ತೀವ್ರ ಪ್ರತಿರೋಧದಿಂದಾಗಿ, ಸೇನೆಯು 12 ಉಗ್ರರನ್ನು ಬಿಡುಗಡೆ ಮಾಡಬೇಕಾಯಿತು. ಇಂಫಾಲ್ ಪೂರ್ವದಲ್ಲಿರುವ ಇಥಾಮ್ ಗ್ರಾಮದಲ್ಲಿ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಸೇನೆ ಸುತ್ತುವರಿದಿತ್ತು.
ಆದರೆ ಈ ಬಾರಿ ಮಹಿಳೆಯರ ನೇತೃತ್ವದಲ್ಲಿ ಸುಮಾರು 1,200ಜನ ಸೇನಾ ವಾಹನಗಳನ್ನು ಸುತ್ತುವರಿದು ಅವರನ್ನು ಮುನ್ನಡೆಯದಂತೆ ತಡೆದರು. ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ಸೇನೆ ಎಷ್ಟೇ ಎಚ್ಚರಿಕೆ ನೀಡಿದರೂ ಎರಡು ಗುಂಪುಗಳ ನಡುವಿನ ಜಟಾಪಟಿ ಕೊನೆಗೊಂಡಿಲ್ಲ. ಇದರಿಂದಾಗಿ ಸೇನೆ 12 ಉಗ್ರರನ್ನು ಬಿಡಬೇಕಾಯಿತು. ಯಾವುದೇ ಪ್ರಾಣಹಾನಿಯಾಗಲೀ, ರಕ್ತಪಾತವಾಗಲೀ ಆಗದೇ ಸೇನೆ ಪ್ರಬುದ್ಧ ನಿರ್ಧಾರ ಕೈಗೊಂಡಿತು ಎನ್ನಲಾಗಿದೆ.
ಸೇನೆಯು ಗ್ರಾಮದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ದೊಡ್ಡ ಸಂಗ್ರಹವನ್ನು ಸ್ವಾಧೀನಪಡಿಸಿಕೊಂಡಿದೆ. ಮೈತೇಯಿ ಪಂಗಡಕ್ಕೆ ಸೇರಿದ ಉಗ್ರಗಾಮಿ ಸಂಘಟನೆ ಕೈಕಾಲೆ ಸದಸ್ಯರು ಪರಾರಿಯಾಗಿದ್ದಾರೆ. ಗ್ರಾಮದ ಪ್ರಮುಖ ವ್ಯಕ್ತಿ ಮೊಯರಂಗತೇಮ್ ತಾಂಬಾ ಅಲಿಯಾಸ್ ಉತ್ತಮ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದಾನೆ. ಈತ ಡೋಗ್ರಾ ಹೊಂಚುದಾಳಿಯ ಮಾಸ್ಟರ್ ಮೈಂಡ್ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಮೇ 3ರಂದು ಆರಂಭವಾದ ಹಿಂಸಾಚಾರ ಇನ್ನೂ ಕಡಿಮೆಯಾಗಿಲ್ಲ. ಮೈತೇಯಿ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವೆ ಸಂಘರ್ಷ ನಡೆಯುತ್ತಿದ್ದು ಇದುವರೆಗೂ ಘಟನೆಯಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರುವ ಕುರಿತು ವರದಿಯಾಗಿದೆ.