ಇಂಫಾಲ: ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಭಾನುವಾರ ವರದಿಯಾಗಿದೆ.
ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಖೋಯ್ಜುಮಂತಬಿ ಗ್ರಾಮದಲ್ಲಿ ಹಿಂಸಾಚಾರನ ನಡೆದಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೂವರು ಕೂಡಾ ಗ್ರಾಮದಲ್ಲಿ ಸ್ವಯಂಸೇವಕರಾಗಿದ್ದು, ತಾತ್ಕಾಲಿಕ ಬಂಕರ್ ಪ್ರದೇಶವನ್ನು ಕಾಪಾಡುತ್ತಿದ್ದರು ಎನ್ನಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಮೂವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಐವರು ಗಾಯಗೊಂಡಿದ್ದು, ಆ ಪೈಕಿ ಗಾಯಗೊಂಡಿರುವ ದಂಪತಿಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಇಂಫಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಉಳಿದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. .
ಈ ನಡುವೆ ಕುಕಿ ಸಮುದಾಯದ ಸಂಘಟನೆಗಳಾದ ಯುನೈಟೆಡ್ ಪೀಪಲ್ಸ್ ಫ್ರಂಟ್ (ಯುಪಿಎಫ್) ಹಾಗೂ ಕುಕಿ ನ್ಯಾಷನಲ್ ಆರ್ಗನೈಸೇಶನ್ 2 ತಿಂಗಳ ಬಳಿಕ ಮಣಿಪುರದ ಕಾಂಗ್ ಪೊಕ್ಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 2 ರಲ್ಲಿ ರಸ್ತೆ ತಡೆಯನ್ನು ಹಿಂತೆಗೆದುಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನವಿ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.
ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿಗಾಗಿ ಮಿಟೈ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಮೇ 3 ರಂದು ಬುಡಕಟ್ಟು ಐಕ್ಯತಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಆದರೆ ಇದಾದ ಬಳಿಕ ಹಿಂಸಾಚಾರ ಭುಗಿಲೆದ್ದು, ಮಣಿಪುರದಾದ್ಯಂತ ಜನಾಂಗೀಯ ಘರ್ಷಣೆ ಮುಂದುವರೆದಿದೆ.