ಬಾಂಗ್ಲಾದೇಶದಲ್ಲಿ ಹಿಂಸಾಚಾರ ಇದೀಗ ಉಲ್ಬಣಿಸಿದೆ. ಪರಿಣಾಮ ಅಲ್ಲಿರುವ ಸುಮಾರು 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ.
ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳು ನಡೆಯುತ್ತಿದೆ.
ಸುಮಾರು 15,000 ಭಾರತೀಯ ಪ್ರಜೆಗಳು ಬಾಂಗ್ಲಾದಲ್ಲಿದ್ದು, ಅವರೆಲ್ಲ ಕ್ಷೇಮವಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ. ಆದರೆ ಸುಮಾರು 300 ರಷ್ಟು ಆತಂಕಿತ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ.
ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಹಲವಾರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಸ್ವರೂಪ ಪಡೆದಿದ್ದು, ಸಾವುನೋವಿಗೆ ಕಾರಣವಾಗಿದೆ. ಶುಕ್ರವಾರ ಕೂಡ ಬಾಂಗ್ಲಾದೇಶದಲ್ಲಿ ಘರ್ಷಣೆಗಳು ಮತ್ತು ಹಿಂಸಾತ್ಮಕ
ಪ್ರತಿಭಟನೆಗಳು ಮುಂದುವರೆದಿವೆ. ಪ್ರತಿಭಟನಾ ನಿರತರು ನರಸಿಂಗಡಿ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿ ನೂರಾರು ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ. ನಂತರ ಜೈಲಿಗೆ ಬೆಂಕಿ ಹಚ್ಚಿದ್ದಾರೆ. ಗಲಭೆಯ ಬಿಸಿ ಸಾಮಾನ್ಯ ಜನರ ಬದುಕಿಗೂ ತಟ್ಟಿದೆ.
ದೇಶಾದ್ಯಂತ ಹರಡಿರುವ ಅಶಾಂತಿಯನ್ನು ತಡೆಯಲು ಪೊಲೀಸರು ಕೂಡ ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಶುಕ್ರವಾರ ಕರ್ಫ್ಯೂ ಮತ್ತು ಮಿಲಿಟರಿ ಪಡೆಗಳ ನಿಯೋಜನೆಯನ್ನು ಘೋಷಿಸಿದೆ. ಆಸ್ಪತ್ರೆಗಳು ನೀಡಿದ ವರದಿಗಳನ್ನು ಉಲ್ಲೇಖಿಸಿ ವಿದ್ಯಾರ್ಥಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಈ ವಾರದ ಘರ್ಷಣೆಯಲ್ಲಿ ಕನಿಷ್ಠ 105 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. 15 ವರ್ಷಗಳ ಅಧಿಕಾರದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಶೇಖ್ ಹಸೀನಾ ಸರ್ಕಾರ ದೊಡ್ಡ ಸವಾಲನ್ನು ಎದುರಿಸಿದೆ