ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಭಾರತದ ಸೆಲಿಬ್ರಿಟಿ ಜೋಡಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೀಗ ಈ ಜೋಡಿ ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ಆಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ದಿನ ನಿತ್ಯದ ಜೀವನದಲ್ಲಿ ಕ್ರೀಡೆಯ ಮಹತ್ವ ಸಾರುವ ‘Let There Be Sport’ ಧ್ಯೇಯವಾಕ್ಯದಡಿ ಜಾಗೃತಿ ಸಾರುವ ಉದ್ದೇಶದಿಂದ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಡ್ಮಿಂಟನ್ ಆಡಿ ಗಮನ ಸೆಳೆದಿದ್ದಾರೆ.
ಪ್ರತಿಯೊಬ್ಬರು ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ ವಿರಾಟ್ ಹಾಗೂ ಅನುಷ್ಕಾ ಈ ರೀತಿ ವಿನೂತನ ಪ್ರಯೋಗ ನಡೆಸಿ ಗಮನ ಸೆಳೆದಿದ್ದಾರೆ. ನಗರದ ರೆಸಿಡೆನ್ಸಿಯಲ್ ಸೊಸೈಟಿಯಲ್ಲಿ ಆಯೋಜಿಸಲಾಗಿದ್ದ ಫ್ರೆಂಡ್ಲಿ ಮಿಶ್ರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಎದುರುಬದುರಾಗಿ ಬ್ಯಾಡ್ಮಿಂಟನ್ ಆಡಿ ಗಮನ ಸೆಳೆದರು. ಈ ಪಂದ್ಯವು ಸಾಕಷ್ಟು ರೋಚಕತೆಯಿಂದ ಕೂಡಿದ್ದು ಮಾತ್ರವಲ್ಲದೇ ಸಾಕಷ್ಟು ಮೋಜಿನ ಸನ್ನಿವೇಶಕ್ಕೂ ಸಾಕ್ಷಿಯಾಯಿತು. ಇದಷ್ಟೇ ಅಲ್ಲದೇ ದಿನನಿತ್ಯದ ಬದುಕಿನಲ್ಲಿ ಫಿಟ್ನೆಸ್ ಎಷ್ಟು ಮುಖ್ಯ ಎನ್ನುವ ಮಹತ್ವದ ಸಂದೇಶವನ್ನು ಅವರು ಸಾರಿದರು.
ಈ ಕುರಿತಂತೆ ಮಾತನಾಡಿದ ವಿರಾಟ್ ಕೊಹ್ಲಿ, ” ಕ್ರೀಡೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಅವಿಭಾಜ್ಯ ಅಂಗವಾಗಿದೆ. ನಮ್ಮ ಜೀವನದ ಇತರೆ ಅಗತ್ಯತೆಗಳಂತೆ ಕ್ರೀಡೆ ಕೂಡಾ ಮಹತ್ವದ್ದು ಎನ್ನುವ ಸಂದೇಶ ಸಾರಲು ನೆರವಾದ ಪೂಮಾ ಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ. ಇದೊಂದು ರೀತಿಯ ವಿಭಿನ್ನ ಅನುಭವವಾಗಿದ್ದು, ನಮ್ಮ ದಿನನಿತ್ಯದ ವೇಳಾಪಟ್ಟಿಯ ಬದಲಾಗಿ ಈ ಆಟವು ಮೋಜಿನಿಂದ ಕೂಡಿತ್ತು. ಸ್ಥಳೀಯರ ಜತೆ ಬೆರೆತಿದ್ದು, ಉದ್ಯೋಗಿಗಳು ಫಿಟ್ನೆಸ್ ಚಾಲೆಂಜ್ ತೆಗೆದುಕೊಂಡಿದ್ದು ಸಾಕಷ್ಟು ಚೆನ್ನಾಗಿತ್ತು. ಇದರಿಂದ ಸ್ಪೂರ್ತಿ ಪಡೆದು ಇನ್ನು ಮುಂದೆ ಎಲ್ಲರೂ ತಮ್ಮ ಜೀವನದಲ್ಲಿ ಕ್ರೀಡೆ ಹಾಗೂ ಫಿಟ್ನೆಸ್ ಕಡೆ ಗಮನ ಕೊಡುವ ಮೂಲಕ ಜೀವನ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಹೇಳಿದ್ದಾರೆ.