ಬೆಂಗಳೂರು: ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಶತಕಗಳ ದಾಖಲೆ ಸರಿಗಟ್ಟಿದ್ದ ವಿರಾಟ್ ಕೊಹ್ಲಿ (Virat Kohli), ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ರೂ ಸಚಿನ್ (Sachin Tendulkar) ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ.
ಲೀಗ್ ಸುತ್ತಿನ ಕೊನೆಯ ಪಂದ್ಯವು ಟೀಂ ಇಂಡಿಯಾ (Team India) ಅಭಿಮಾನಿಗಳ ಪಾಲಿಗೆ ರಸದೌತಣವಾಗಿತ್ತು. ಟಾಸ್ ಗೆದ್ದು ಮೊದಲು ಕ್ರೀಸ್ಗಿಳಿದ ಟೀಂ ಇಂಡಿಯಾ ಬ್ಯಾಟರ್ಸ್, ನೆದರ್ಲೆಂಡ್ಸ್ ಬೌಲರ್ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಅದರಲ್ಲೂ ಚೇಸ್ ಮಾಸ್ಟರ್ ಖ್ಯಾತಿಯ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವದಾಖಲೆ ಮುರಿಯುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಆದ್ರೆ ಕೊಹ್ಲಿ ಅರ್ಧಶತಕ ದಾಖಲಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಡಚ್ಚರ ವಿರುದ್ಧ ಅರ್ಧಶತಕ ಸಿಡಿಸಿದ ಕೊಹ್ಲಿ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 7 ಬಾರಿ 50+ ರನ್ ಗಳಿಸಿದ ವಿಶೇಷ ಸಾಧನೆ ಮಾಡಿದರು. ಇದರೊಂದಿಗೆ ಈ ಸಾಧನೆ ಮಾಡಿದ್ದ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆಯನ್ನು ಸರಿಗಟ್ಟಿದರು. 2003ರಲ್ಲಿ ಸಚಿನ್ ತೆಂಡೂಲ್ಕರ್ 7 ಬಾರಿ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 50+ ಸ್ಕೋರ್ ಗಳಿಸಿದ್ದರೆ, ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ (Shakib Al Hasan) 2019ರಲ್ಲಿ ಈ ಸಾಧನೆ ಮಾಡಿದ್ದರು. ಕೊಹ್ಲಿ 2023ರ ವಿಶ್ವಕಪ್ ಆವೃತ್ತಿಯಲ್ಲಿ ಇವರಿಬ್ಬರ ದಾಖಲೆಯನ್ನು ಸರಿಗಟ್ಟಿದ್ದಾರೆ.