ಲಂಡನ್: ಕಳೆದ ಒಂದು ದಶಕದಿಂದ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈ ಪೀಳಿಗೆಯ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಲಂಡನ್ನ ದಿ ಓವಲ್ ಅಂಗಣದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್ನೊಂದಿಗೆ ಮಾತನಾಡಿದ ಟೀಮ್ ಇಂಡಿಯಾ ಮಾಜಿ ನಾಯಕ, ಆಸ್ಟ್ರೇಲಿಯಾದ ಉಪನಾಯಕನ ಬ್ಯಾಟಿಂಗ್ ಶೈಲಿಯನ್ನು ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯಾದ ಭರವಸೆಯ ಆಟಗಾರ ಸ್ಟೀವನ್ ಸ್ಮಿತ್ ಅವರು ಕಳೆದ ಒಂದು ದಶಕದಿಂದ ತಮ್ಮ ಬ್ಯಾಟಿಂಗ್ನಲ್ಲಿ ತೋರಿರುವ ಸ್ಥಿರತೆ ಮತ್ತು ರನ್ ಸರಾಸರಿಯನ್ನು ಆಧಾರವಾಗಿಟ್ಟುಕೊಂಡು ಮಹತ್ವದ ಹೇಳಿಕೆ ನೀಡಿದ್ದಾರೆ.
“ನನ್ನ ಪ್ರಕಾರ ಸ್ಟೀವನ್ ಸ್ಮಿತ್ ಅವರು ಪ್ರಸಕ್ತ ತಲೆಮಾರಿನ ನಿಜವಾದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್ಮನ್ ಆಗಿದ್ದಾರೆ. ಅವರು ಇದನ್ನು ಸಾಬೀತುಪಡಿಸಿದ್ದಾರೆ. ಈ ಕಾಲದ ಯಾವುದೇ ಬ್ಯಾಟರ್ಗಳಿಗೆ ಹೋಲಿಸಿದರೆ, ಅವರ ಆಟದಲ್ಲಿರುವ ಕೌಶಲತೆ ನಿಜಕ್ಕೂ ಅದ್ಭುತವಾಗಿದೆ,” ಎಂದು ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ
“ಸ್ಟೀವನ್ ಸ್ಮಿತ್ ಅವರ ಟೆಸ್ಟ್ ಜೀವನದ ದಾಖಲೆ ಎಲ್ಲರಿಗೂ ತಿಳಿದಿದೆ. 85-90 ಟೆಸ್ಟ್ಗಳಲ್ಲಿ 60ರ ಸರಾಸರಿ ಹೊಂದಿರುವುದು ನಿಜಕ್ಕೂ ನಂಬಲಾಗದ ಸಂಗತಿ. ಕಳೆದ 10 ವರ್ಷಗಳಿಂದ ಅವರು ರನ್ ಗಳಿಸಿರುವ ಸ್ಥಿರತೆ ಮತ್ತು ಪ್ರಭಾವವನ್ನು ನಾನು ಬೇರೆ ಯಾವ ಬ್ಯಾಟರ್ಗಳಲ್ಲಿ ನೋಡಿಲ್ಲ. ಇದು ಅವರ ಕೌಶಲ ಮತ್ತು ಮನೋಧರ್ಮವನ್ನು ಸೂಚಿಸುತ್ತದೆ,” ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಹೇಳಿದ್ದಾರೆ.