ಬೆಂಗಳೂರು : ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಹಲವು ಯುವ ಪ್ರತಿಭೆಗಳು ಮಿಂಚು ಹರಿಸುತ್ತಿದ್ದು, ಬಿಸಿಸಿಐನ ಆಯ್ಕೆಗಾರರ ಗಮನ ಸೆಳೆಯಲು ಹೊರಟಿದ್ದಾರೆ. ಕೆಕೆಆರ್ ತಂಡದ ಬ್ಯಾಟಿಂಗ್ ಅಸ್ತ್ರವಾಗಿರುವ ರಿಂಕು ಸಿಂಗ್ ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದು, ಡಿಫೆಂಡಿಂಗ್ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಅಂತಿಮ ಓವರ್ ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ 5 ಭರ್ಜರಿ ಸಿಕ್ಸರ್ ಗಳನ್ನು ಬಾರಿಸಿ ಅಂತಿಮ ಎಸೆತದಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಯುವ ಎಡಗೈ ಆಟಗಾರನ ಈ ಸ್ಫೋಟಕ ಆಟವನ್ನು ಆರ್ ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಗುಜರಾತ್ ಟೈಟನ್ಸ್ ನೀಡಿದ 205 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಗೆ ಅಂತಿಮ ಓವರ್ ನಲ್ಲಿ ಪಂದ್ಯ ಗೆಲ್ಲಲು 29 ರನ್ ಗಳ ಅಸಾಧಾರಣ ಗುರಿ ಇತ್ತು. ಟೈಟನ್ಸ್ ವೇಗಿ ಯಶ್ ದಯಾಳ್ ಅವರ ಮೊದಲ ಎಸೆತದಲ್ಲಿ ಉಮೇಶ್ ಯಾದವ್ ಸಿಂಗಲ್ ತೆಗೆದುಕೊಂಡು ರಿಂಕು ಸಿಂಗ್ ಗೆ ಸ್ಟ್ರೆಕ್ ನೀಡಿದ್ದರು. ಈ ಹಂತದಲ್ಲಿ ಪಂದ್ಯದ ದಿಕ್ಕು ಬದಲಿಸುವಂತೆ ಬ್ಯಾಟ್ ಬೀಸಿದ ರಿಂಕು ಸಿಂಗ್, ಬ್ಯಾಕ್ ಟು ಬ್ಯಾಕ್ 5 ಸಿಕ್ಸರ್ ಗಳನ್ನು ಸಿಡಿಸಿ ಕೊನೆಯ ಎಸೆತದಲ್ಲಿ ಕೆಕೆಆರ್ ಗೆ 3 ವಿಕೆಟ್ ಗಳ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು.
ಜಿಯೋ ಸಿನಿಮಾದಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪರೊಂದಿಗೆ ಸಂವಾದ ನಡೆಸಿರುವ ಆರ್ ಸಿಬಿಯ ಸ್ಫೋಟಕ ಆಟಗಾರ ವಿರಾಟ್ ಕೊಹ್ಲಿ, ರಿಂಕು ಸಿಂಗ್ ಅವರು ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ನಂಬಲಾಗದಂತಹ ಪ್ರದರ್ಶನ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.
“ಐಪಿಎಲ್ ಟೂರ್ನಿಯಲ್ಲಿ ಯುವ ಪ್ರತಿಭೆಗಳು ನೀಡುತ್ತಿರುವ ಪ್ರದರ್ಶನ ವನ್ನು ನೋಡಲು ವಿಸ್ಮಯಕಾರಿ ಆಗಿದೆ. ಅವರಿಂದ ಈ ರೀತಿಯ ಪ್ರದರ್ಶನವನ್ನು ನಾನು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಕೊಹ್ಲಿ ಶ್ಲಾಘಿಸಿದ್ದಾರೆ.
“ಗುಜರಾತ್ ಟೈಟನ್ಸ್ ಪಂದ್ಯದಲ್ಲಿ ಕೆಕೆಆರ್ ನ ಯುವ ಪ್ರತಿಭೆ ರಿಂಕು ಸಿಂಗ್ 5 ಸಿಕ್ಸರ್ ಗಳನ್ನು ಸಿಡಿಸಿರುವ ರೀತಿ ರೋಚಕವಾಗಿದೆ.ಇದೊಂದು ವಿಸ್ಮಯ ಇನಿಂಗ್ಸ್ ಆಗಿದ್ದು, ಹಿಂದೆಂದೂ ಈ ರೀತಿಯ ಆಟ ಮೂಡಿಬರಲು ಸಾಧ್ಯವಿಲ್ಲ. ಪಂದ್ಯವನ್ನು ಗೆಲ್ಲಿಸುವ ಸಲುವಾಗಿ 5 ಸಿಕ್ಸರ್ ಗಳನ್ನು ಬಾರಿಸಿದ ಅವರ ಸಾಮರ್ಥ್ಯ ಯಾವ ಮಟ್ಟದಲ್ಲಿದೆ ಎಂಬುದನ್ನು ಯೋಚಿಸಬೇಕು. ಇಂತಹ ಅದ್ಭುತ ಯುವಕರು ತಂಡಕ್ಕೆ ಸಿಗುತ್ತಿರುವುದು ಹೆಮ್ಮೆಯ ವಿಷಯ” ಎಂದು ಆರ್ ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಶಂಸಿಸಿದ್ದಾರೆ.