ಪಲ್ಲೆಕಲೆ (ಶ್ರೀಲಂಕಾ): ನೇಪಾಳ ವಿರುದ್ಧ ಸೋಮವಾರ (ಸೆಪ್ಟೆಂಬರ್ 4) ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನೇಪಾಳ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾದ ಕ್ಲಾಸ್ ಆಟಗಾರ ಬಹುರಾಷ್ಟ್ರೀಯ ಪಂದ್ಯಗಳಲ್ಲಿ 100 ಕ್ಯಾಚ್ ಗಳನ್ನು ಪೂರೈಸಿ ತಮ್ಮ ಹೆಸರನ್ನು ಇತಿಹಾಸ ಪುಟದಲ್ಲಿ ದಾಖಲಿಸಿದ್ದಾರೆ.
ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್ ಮಾಡಿದ ಟೀಮ್ ಇಂಡಿಯಾ ಫೀಲ್ಡರ್ ಗಳು ಆರಂಭಿಕ 5 ಓವರ್ ಗಳಲ್ಲೇ 3 ಕ್ಯಾಚ್ ಕೈಚೆಲ್ಲುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದರು. ವಿಶ್ವ ಶ್ರೇಷ್ಠ ಫೀಲ್ಡರ್ ಆದ ವಿರಾಟ್ ಕೊಹ್ಲಿ ಕೂಡ 2ನೇ ಓವರ್ ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ಆಸಿಫ್ ಶೇಖ್ 1 ರನ್ ಗಳಿಸಿ ಆಡುತ್ತಿದ್ದಾಗ ಕ್ಯಾಚ್ ಕೈಚೆಲ್ಲಿ ಜೀವದಾನ ನೀಡಿದ್ದರು. ಇದರ ಲಾಭ ಪಡೆದ ಶೇಖ್ 97 ಎಸೆತಗಳಲ್ಲಿ 8 ಬೌಂಡರಿ ಸಹಿತ 58 ರನ್ ಸಿಡಿಸಿ ಅಪಾಯಕಾರಿಯಾಗಿದ್ದರು. ಆದರೆ ಕೊನೆಗೂ ಆಸಿಫ್ ಶೇಖ್, ವೇಗಿ ಸಿರಾಜ್ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿ ಪಡೆದ ಸ್ಟನ್ನಿಂಗ್ ಕ್ಯಾಚ್ ನಿಂದ ಪೆವಿಲಿಯನ್ ತೊರೆದರು.
ಕ್ಯಾಚ್ಗಳ ಶತಕ ಪೂರೈಸಿದ ವಿರಾಟ್
ವಿಶ್ವದ ಆಧುನಿಕ ಕ್ರಿಕೆಟ್ ನ ಶ್ರೇಷ್ಠ ಫೀಲ್ಡರ್ ಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಿರಾಟ್ ಕೊಹ್ಲಿ, ಬಹುರಾಷ್ಟ್ರೀಯ ಪಂದ್ಯಗಳಲ್ಲಿ 100 ಕ್ಯಾಚ್ ಪೂರೈಸಿ ಇತಿಹಾಸ ಸೃಷ್ಟಿಸಿದರು. ಇದರಲ್ಲಿ ಐಸಿಸಿ ಆಯೋಜನೆಯ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಎಸಿಸಿ ಆಯೋಜನೆಯ ಏಷ್ಯಾಕಪ್ ಟೂರ್ನಿಯು ಸೇರಿದೆ. ಭಾರತದ ಪರ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ನಂತರ ಬಹುರಾಷ್ಟ್ರೀಯ ಪಂದ್ಯಗಳಲ್ಲಿ ಶತಕಗಳ ಕ್ಯಾಚ್ ಪೂರೈಸಿದ ಭಾರತದ 2ನೇ ಕ್ಷೇತ್ರ ರಕ್ಷಣಗಾರ ಎಂಬ ದಾಖಲೆಗೆ ವಿರಾಟ್ ಪಾತ್ರರಾಗಿದ್ದಾರೆ.