ಬೆಂಗಳೂರು : ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಬ್ಯಾಟ್ಸ್ಮನ್ಗೆ ನೀಡುವ ಆರೇಂಜ್ ಕ್ಯಾಪ್ ರೇಸ್ನಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ (2015, 2017, 2019) ಅಗ್ರಸ್ಥಾನದಲ್ಲಿದ್ದಾರೆ. ಸ್ವಘೋಷಿತ ಯೂರ್ನಿವರ್ಸ್ ಬಾಸ್ ಕ್ರಿಸ್ ಗೇಲ್ (2011, 2012) ನಂತರದ ಸ್ಥಾನದಲ್ಲಿದ್ದಾರೆ. 2022ರ ಐಪಿಎಲ್ ಟೂರ್ನಿಯಲ್ಲಿ ಇಂಗ್ಲೆಂಡ್ನ ಸ್ಫೋಟಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್ 863 ರನ್ ಸಿಡಿಸಿ ಆರೇಂಜ್ ಕ್ಯಾಪ್ ಗೆದ್ದಿದ್ದರು.
ಐಪಿಎಲ್ 2023 ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಬಟ್ಲರ್, 22 ಎಸೆತಗಳಲ್ಲಿ 7 ಮನಮೋಹಕ ಬೌಂಡರಿ, 3 ಸ್ಫೋಟಕ ಸಿಕ್ಸರ್ ಸಿಡಿಸಿ 54 ರನ್ ಚಚ್ಚುವ ಮೂಲಕ ಪಂದ್ಯ ಶ್ರೇಷ್ಠರಾಗಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಇದೇ ಮಾದರಿ ರನ್ ಹೊಳೆ ಹರಿಸಿ ಗೇಲ್ ನಂತರ ಸತತ 2ನೇ ಬಾರಿ ಆರೇಂಜ್ ಕ್ಯಾಪ್ ಗೆಲ್ಲಲು ಬಟ್ಲರ್ ಎದುರು ನೋಡುತ್ತಿದ್ದಾರೆ. ಆದರೆ ಡ್ಯಾಷಿಂಗ್ ಓಪನರ್ ಖ್ಯಾತಿಯ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಬಟ್ಲರ್ ಬದಲು ಭಾರತೀಯ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್ ಸೇರಿದಂತೆ 4 ಸ್ಫೋಟಕ ಬ್ಯಾಟರ್ಗಳ ಪೈಕಿ ಒಬ್ಬರು ಆರೇಂಜ್ ಕ್ಯಾಪ್ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಕೋವಿಡ್-19 ಮಹಾಮಾರಿ ಸೋಂಕಿನ ಹಿನ್ನೆಲೆಯಿಂದ 3 ವರ್ಷಗಳ ನಂತರ ಇದೇ ಮೊದಲ ಬಾರಿ ಹೋಮ್ ಅಂಡ್ ಅವೇ ಮಾದರಿಯಲ್ಲಿ ಅಂದರೆ 7 ಪಂದ್ಯಗಳು ತವರು ನೆಲದಲ್ಲಿ, 7 ಪಂದ್ಯಗಳು ಎದುರಾಳಿಗಳ ನೆಲದಲ್ಲಿ ನಡೆಯಲಿದೆ. ತವರು ಅಭಿಮಾನಿಗಳ ಎದುರು ವಿದೇಶಿ ಬ್ಯಾಟರ್ಗಳಿಗೆ ಸೆಡ್ಡು ಹೊಡೆದು ಸ್ಫೋಟಕ ಬ್ಯಾಟಿಂಗ್ ನಡೆಸಿ ಅತಿ ಹೆಚ್ಚು ರನ್ ಕಲೆ ಹಾಕುವ ಮೂಲಕ ಆರೇಂಜ್ ಕ್ಯಾಪ್ ಗೆಲ್ಲಲು ಭಾರತದ ಸ್ಫೋಟಕ ಬ್ಯಾಟ್ಸ್ಮನ್ಗಳು ಎದುರು ನೋಡುತ್ತಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ವೀರೇಂದ್ರ ಸೆಹ್ವಾಗ್, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರರ್ಗಳಿಸಿ ಆರೇಂಜ್ ಕ್ಯಾಪ್ ಗೆಲ್ಲುವ ಆಟಗಾರರನ್ನು ಹೆಸರಿಸಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಅಬ್ಬರಿಸಿದ ಋತುರಾಜ್ ಗಾಯಕ್ವಾಡ್, 4 ಫೋರ್ ಮತ್ತು 9 ಸಿಕ್ಸರ್ಗಳನ್ನು ಒಳಗೊಂಡ 92 ರನ್ ಚಚ್ಚಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಬ್ಯಾಟ್ಸ್ಮನ್ ಋತುರಾಜ್ ಗಾಯಕ್ವಾಡ್ ಈ ಬಾರಿಯ ಆರೇಂಜ್ ಕ್ಯಾಪ್ ಗೆಲ್ಲುವ ಹಾಟ್ ಫೇವರಿಟ್ ಎಂದು ಸೆಹ್ವಾಗ್ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಲು ಎಡವಿರುವ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ, ಕನ್ನಡಿಗ ಕೆ.ಎಲ್. ರಾಹುಲ್ ಕೂಡ ಮುಂದಿನ ಪಂದ್ಯಗಳಲ್ಲಿ ಲಯ ಕಂಡುಕೊಂಡು ಆರೇಂಜ್ ಕ್ಯಾಪ್ ಗೆಲ್ಲಬಲ್ಲರು. ಶ್ರೇಷ್ಠ ಲಯಕ್ಕೆ ಮರಳಿರುವ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡ ಈ ಬಾರಿ ಆರೇಂಜ್ ಕ್ಯಾಪ್ ರೇಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವೀರೂ ಅಭಿಪ್ರಾಯ ಪಟ್ಟಿದ್ದಾರೆ.
“ಅತಿ ಹೆಚ್ಚು ರನ್ ಸಿಡಿಸಿ ಆರೇಂಜ್ ಕ್ಯಾಪ್ ಗೆಲ್ಲುವಲ್ಲಿ ನಂಬರ್ 1 ಸ್ಥಾನವನ್ನು ಸಹಜವಾಗಿಯೇ ಯುವ ಸ್ಫೋಟಕ ಆಟಗಾರ ಋತುರಾಜ್ ಗಾಯಕ್ವಾಡ್ಗೆ ನೀಡುತ್ತೇನೆ. ಇನ್ನು 2ನೇ ಸ್ಥಾನದಲ್ಲಿ ಕೆ.ಎಲ್. ರಾಹುಲ್ ನಿಂತರೆ, 3 ನೇ ಸ್ಥಾನ ನಿರ್ಧರಿಸಲು ನಾಣ್ಯ ಚಿಮ್ಮಿಸಿ ವಿರಾಟ್ ಕೊಹ್ಲಿಯೋ ಅಥವಾ ರೋಹಿತ್ ಶರ್ಮಾನೋ ಎಂದು ನಿರ್ಧರಿಸಬೇಕಾಗುತ್ತದೆ,” ಎಂದು ಸೆಹ್ವಾಗ್ ಹೇಳಿದ್ದಾರೆ.