ಬೆಂಗಳೂರು: ಕೆಂಪೇಗೌಡ ಲೇಔಟ್ ನಲ್ಲಿ ಮೂಲಭೂತ ಸೌಕರ್ಯ ಕೊರತೆ ವಿಚಾರವಾಗಿ ಮುಂದಿನ ವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.
ಕೆಂಪೇಗೌಡ ಲೇಔಟ್ ನಿವಾಸಿಗಳ ನಿಯೋಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕುಮಾರಕೃಪಾ ಅತಿಥಿ ಗೃಹದಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
“ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಕೆಂಪೇಗೌಡ ಬಡವಾಣೆ ನಿರ್ಮಾಣಕ್ಕೆ ಮುಂದಾಗಿದ್ದು, 4040 ಎಕರೆಯಲ್ಲಿ ಈ ಬಡಾವಣೆ ನಿರ್ಮಾಣ ಮಾಡುವ ದೊಡ್ಡ ಯೋಜನೆ ಆಗಿದೆ. ಈ ಯೋಜನೆ ಆಮೆ ಗತಿಯಲ್ಲಿ ಸಾಗುತ್ತಿದ್ದು, ನೀವುಗಳು ಮುಂದೆ ನಿಂತು ಯೋಜನೆ ಪೂರ್ಣಗೊಳಿಸಬೇಕು.
ಈ ಯೋಜನೆಗೆ ಇನ್ನು 1400 ಎಕರೆ (ಯೋಜನೆ 30%) ಭೂ ಸ್ವಾಧೀನ ಬಾಕಿ ಇದೆ. ಇದರಲ್ಲಿ 600 ಎಕರೆ ಭೂ ಸ್ವಾಧೀನ ಪ್ರಕ್ರಿಯೆಗೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಉಳಿದಂತೆ ಸರ್ಕಾರಿ ಜಮೀನು ಸ್ವಾಧೀನಕ್ಕೆ ಯಾವುದೇ ಆಸಕ್ತಿ ತೋರುತ್ತಿಲ್ಲ. ಕಂದಾಯ ಭೂಮಿ ಪಡೆಯಲು ಕಂದಾಯ ಇಲಾಖೆ ಜೊತೆ ಸಮನ್ವಯ ಮಾಡಲಾಗುತ್ತಿಲ್ಲ. ಸ್ವಹಿತಾಸಕ್ತಿಗಾಗಿ ಈ ಭೂ ಸ್ವಾಧೀನ ಮಾಡುತ್ತಿಲ್ಲ.
ಈ ಬಡವಾಣೆಯಲ್ಲಿ ಕೇವಲ 30-50 ಆಡಿ ರಸ್ತೆಗಳು ಮಾತ್ರ ಇವೆ. ಇವುಗಳ ಡಾಂಬರೀಕರಣಕ್ಕೆ ಟೆಂಡರ್ ಕೂಡ ಕರೆದಿಲ್ಲ.
4 ಸಾವಿರ ಎಕರೆ ಬಡಾವಣೆಗೆ ಒಂದೇ ಒಂದು ಆಟದ ಮೈದಾನ ಇಲ್ಲ. ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಲ್ಲ.
2016ರಿಂದ ಇಲ್ಲಿಯವರೆಗೆ 26 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, 10 ಸಾವಿರ ನಿವೇಶನಗಳನ್ನು ಎರಡು ಹಂತದಲ್ಲಿ ಸಾರ್ವಜನಿಕರಿಗೆ ನೀಡಿದ್ದು, ರೈತರಿಗೆ 12 ಸಾವಿರ ನಿವೇಶನ, 3-4 ಸಾವಿರ ನಿವೇಶನ ಅರ್ಕಾವತಿ ಬಡಾವಣೆ ಫಲಾನುಭವಿಗಳಿಗೆ ಇಲ್ಲಿ ಹಂಚಿಕೆ ಮಾಡಲಾಗಿದೆ. ಇನ್ನು 3 ಸಾವಿರ ಕಾರ್ನರ್ ನಿವೇಶನ ಹರಾಜು ಹಾಕಿದ್ದಾರೆ.
ಯಾವುದೇ ಮೂಲ ಸೌಕರ್ಯ ನೀಡದ ಪರಿಣಾಮ 7 ವರ್ಷಗಳ ಹಿಂದೆ ನಿವೇಶನ ಪಡೆದರೂ ಮನೆ ಕಟ್ಟಲು ಆಗುತ್ತಿಲ್ಲ. ಕೋವಿಡ್ ಬಂದ ನಂತರ ಈ ಬಡಾವಣೆ ಮೂಲಸೌಕರ್ಯ ನಿರ್ಮಾಣದಲ್ಲಿ ಯಾವುದೇ ಪ್ರಗತಿ ಆಗಿಲ್ಲ.
ನಂತರ ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿಗಳು, “ನೀವು ಆಘಾತಕಾರಿ ಅಂಶಗಳನ್ನು ಹೇಳುತ್ತಿದ್ದೀರಿ. 4 ಸಾವಿರ ಎಕರೆ ಬಡಾವಣೆಯಲ್ಲಿ ಒಂದು ಆಟದ ಮೈದಾನ ಇಲ್ಲ ಎನ್ನುತ್ತಿದ್ದಾರೆ. ನಾನು ಮುಂದಿನ ವಾರ ಕೆಂಪೇಗೌಡ ಬಡಾವಣೆಗೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ಮಾಡುತ್ತೇನೆ” ಎಂದು ತಿಳಿಸಿದರು.