ಸಿನಿಮಾಗಳು ಸಾರ್ವತ್ರಿಕವಾಗಿ ಎಲ್ಲರೂ ವೀಕ್ಷಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ದೃಷ್ಟಿ ಹಾಗೂ ಶ್ರವಣ ದೋಷವುಳ್ಳ ವ್ಯಕ್ತಿಗಳಿಗೂ ಸಹ ಸಿನಿಮಾಗಳು ಲಭ್ಯವಾಗುವುದನ್ನು ಖಾತರಿಪಡಿಸುವುದು ಇದರ ಉದ್ದೇಶವಾಗಿದೆ. ಹಾಗಾಗಿ, ಸಿನಿಮಾದಲ್ಲಿ ಇನ್ನು ಮುಂದೆ ಓಪನಿಂಗ್ ಕ್ಯಾಪ್ಷನಿಂಗ್ ಅಥವಾ ಕ್ಲೋಸಡ್ ಕ್ಯಾಪ್ಷನಿಂಗ್ ಅಥವಾ ಭಾರತೀಯ ಸಂಜ್ಞ್ಯಾ ಭಾಷೆಯನ್ನು ಮತ್ತು ಧ್ವನಿ ವಿವರಣೆಯನ್ನು ದೃಷ್ಟಿ ವಿಶೇಷ ಚೇತನರಿಗಾಗಿ ಬಳಕೆ ಮಾಡಬೇಕೆಂದು ಸೂಚಿಸಲಾಗಿದೆ.
ಮೊದಲಿಗೆ 2024ರ ಸೆಪ್ಟೆಂಬರ್ 15ರೊಳಗೆ ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ತಯಾರಾಗುವ ಚಿತ್ರಗಳು ಈ ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. 2025ರ ಜನವರಿ 1ರಿಂದ ಅನ್ವಯವಾಗುವಂತೆ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸುವ ಚಿತ್ರಗಳಿಗೂ ಇದು ಅನ್ವಯವಾಗುತ್ತದೆ. 2025ರ ಸೆಪ್ಟೆಂಬರ್ 15ರಿಂದ ಅನ್ವಯವಾಗುವಂತೆ ಈ ಎಲ್ಲಾ ಅಂಶಗಳನ್ನು , ಚಿತ್ರ ಮಂದಿರಗಳಲ್ಲೂ ಕೂಡ ಖಾತರಿ ಪಡಿಸುವುದು ಕಡ್ಡಾಯವಾಗಿದೆ.
CBFC ಪ್ರಮಾಣೀಕರಿಸಿದ ಎಲ್ಲಾ ಚಿತ್ರಗಳಿಗೂ ಇದು ಅನ್ವಯವಾಗಲಿದೆ. ಇದರ ಕಾರ್ಯ ವೈಖರಿಯ ಕುರಿತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ – CBFC ನಿಗಾ ವಹಿಸಲಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬಯಸುವವರು ಬೆಂಗಳೂರಿನ ಕೋರಮಂಗಲದ ಕೇಂದ್ರೀಯ ಸದನದಲ್ಲಿರುವ CBFC ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಿ ಬಿ ಎಫ್ ಸಿ ಪ್ರಾದೇಶಿಕ ಅಧಿಕಾರಿ ಯಶವಂತ ಶಹನಾಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ