ಅಮೆರಿಕ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಉತ್ಸುಕತೆ ಹೊಂದಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ, ತಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿಯ ಹುಡುಕಾಟದಲ್ಲಿದ್ದಾರೆ. ಕೋಟ್ಯಧೀಶರಾಗಿರುವ ವಿವೇಕ್ ರಾಮಸ್ವಾಮಿ, ಭಾರತೀಯ ಮೂಲದವರೇ ಆದ ಅಪೂರ್ವ ಅವರನ್ನು ವಿವಾಹ ಆಗಿದ್ದಾರೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ.
ಸಿಬ್ಬಂದಿ ನೇಮಕಾತಿ ವೆಬ್ಸೈಟ್ ಒಂದರಲ್ಲಿ ಉದ್ಯೋಗಾವಕಾಶದ ಕುರಿತಾಗಿ ಜಾಹೀರಾತು ನೀಡಿರುವ ವಿವೇಕ್ ರಾಮಸ್ವಾಮಿ ಸಹಾಯಕರು, ರಾಮಸ್ವಾಮಿ ದಂಪತಿಯ ಇಬ್ಬರು ಮಕ್ಕಳನ್ನ ನೋಡಿಕೊಳ್ಳುವ ದಾದಿಗೆ ಬರೋಬ್ಬರಿ 1 ಮಿಲಿಯನ್ಗೂ ಹೆಚ್ಚು ಸಂಬಳ ನೀಡೋದಾಗಿ ಹೇಳಿದ್ದಾರೆ. ಭಾರತದ ರೂಪಾಯಿ ಲೆಕ್ಕದಲ್ಲಿ 80 ಲಕ್ಷ ರೂ. ಆಗುತ್ತದೆ.
ಎಸ್ಟೇಟ್ ಜಾಬ್ಸ್ ಡಾಟ್ ಕಾಂ ಎಂಬ ವೆಬ್ಸೈಟ್ನಲ್ಲಿ ವಿವೇಕ್ ರಾಮಸ್ವಾಮಿ ಕುಟುಂಬಸ್ಥರ ಉದ್ಯೋಗಾವಕಾಶ ಜಾಹೀರಾತು ಪ್ರಕಟವಾಗಿದೆ. ಅಮೆರಿಕದ ಅತ್ಯಂತ ಪ್ರತಿಷ್ಠಿತ ಕುಟುಂಬದಲ್ಲಿ ಸೇವೆ ಸಲ್ಲಿಸುವ ಅವಕಾಶ ಇದು ಎಂದು ಬರೆಯಲಾಗಿದೆ. ಕುತೂಹಲ, ಸಾಹಸಮಯ ಹಾಗೂ ಚಲನ ಶೀಲ ವ್ಯಕ್ತಿತ್ವವು ನಮ್ಮ ಕುಟುಂಬದ ಜೀವನ ಶೈಲಿ ಎಂದು ವಿವರಿಸಲಾಗಿದ್ದು, ನಮ್ಮ ಮಕ್ಕಳ ಬೆಳವಣಿಗೆ ಹಾಗೂ ವಿಕಾಸಕ್ಕೆ ಪೂರಕವಾಗಿ ಕೆಲಸ ಮಾಡುವ ದಾದಿ ಬೇಕಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ತಮ್ಮ ಮಕ್ಕಳನ್ನು ನೋಡಿಕೊಳ್ಳುವ ದಾದಿ ವಾರಕ್ಕೆ 84 ರಿಂದ 96 ಗಂಟೆ ದುಡಿಯಬೇಕಿದೆ. ಜೊತೆಗೆ ವಾರದ ರಜೆಗಳೂ ಇರುತ್ತವೆ. ದಾದಿಯಾಗಿ ಕಾರ್ಯ ನಿರ್ವಹಿಸುವವರು ನಮ್ಮ ಕುಟುಂಬಕ್ಕಾಗಿ ಕೆಲಸ ಮಾಡುವ ಬಾಣಸಿಗರು, ಮನೆ ಕೆಲಸದವರು ಹಾಗೂ ರಕ್ಷಣಾ ಸಿಬ್ಬಂದಿ ಜೊತೆ ಸಮನ್ವಯ ಸಾಧಿಸಬೇಕು. ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು. ಮಕ್ಕಳನ್ನು ತರಬೇತುದಾರರ ರೀತಿ ನೋಡಿಕೊಳ್ಳಬೇಕು. ಅವರ ಆಟದ ಸ್ಥಳ, ಆಟದ ವಸ್ತುಗಳು, ಬಟ್ಟೆಗಳು ಸೇರಿದಂತೆ ಅವರಿಗೆ ಪೂರಕವಾದ ಎಲ್ಲ ಅಗತ್ಯತೆಗಳ ಮೇಲೆ ನಿಗಾ ವಹಿಸಬೇಕು ಎಂದು ರಾಮಸ್ವಾಮಿ ಅವರದ್ದು ಎನ್ನಲಾದ ಈ ಜಾಹೀರಾತಿನಲ್ಲಿ ವಿವರಿಸಲಾಗಿದೆ.