ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆರೋಗ್ಯ ಸಾಕಷ್ಟು ಕ್ಷೀಣಿಸಿದೆ. ಪುಟಿನ್ ಆರೋಗ್ಯದ ಕುರಿತು ಬಿಡುಗಡೆ ಮಾಡಿರುವ ವರದಿಯಲ್ಲಿ ಪುಟಿನ್ ದೃಷ್ಟಿ ಮಂಜಾಗುತ್ತಿದ್ದು, ಕೈ, ಕಾಲಿನ ಸ್ವಾಧೀನ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ
ಪುಟಿನ್ಗೆ ಅತಿಯಾದ ತಲೆನೋವು, ದೃಷ್ಟಿ ಮಂಜಾಗುವುದು ಹಾಗೂ ನಾಲಿಗೆ ಮರಗಟ್ಟುವಿಕೆ ಉಂಟಾಗುತ್ತಿದೆ ಎಂದು ವೈದ್ಯರು ಹೇಳಿರುವುದಾಗಿ ರಷ್ಯಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪುಟಿನ್ ಈಗಾಗಲೇ ಬಲಗೈ ಮತ್ತು ಬಲಗಾಲಿನ ಭಾಗಶಃ ಸ್ವಾಧೀನ ಕಳೆದುಕೊಳ್ಳುತ್ತಿದ್ದು, ಅವರಿಗೆ ತುರ್ತು ವೈದ್ಯಕೀಯ ಆರೈಕೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಆದ್ರೆ ಕ್ರೆಮ್ಲಿನ್ ಮತ್ತು ರಷ್ಯಾದ ಆರೋಗ್ಯ ಸಚಿವರು ಇದನ್ನು ನಿರಾಕರಿಸಿದ್ದು ಪುಟಿನ್ ಆರೋಗ್ಯವಾಗಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ.
ಈ ಹಿಂದೆಯೇ ವೈದ್ಯರು ಕೌನ್ಸಿಲಿಂಗ್ ಮಾಡಿ, ಔಷಧಿ ತೆಗೆದುಕೊಂಡು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಆದರೆ ಪುಟಿನ್ ವಿಶ್ರಾಂತಿ ಪಡೆಯಲು ನಿರಾಕರಿಸಿ, ಉಕ್ರೇನ್ ವಿರುದ್ಧ ಯುದ್ಧದ ಬೆಳವಣಿಗೆಯಲ್ಲಿ ತೊಡಗಿಕೊಂಡಿದ್ದ ಪರಿಣಾಮ ಆರೋಗ್ಯ ಮತ್ತಷ್ಟು ಬಿಗಡಾಯಿಸಿಕೊಂಡಿದೆ ಎನ್ನಲಾಗುತ್ತಿದೆ.
ಈ ಹಿಂದೆ ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್ಎಸ್ಬಿ ಪುಟಿನ್ ಕ್ಯಾನ್ಸರ್ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದು ಹೆಚ್ಚೆಂದರೆ ಇನ್ನು 3 ವರ್ಷ ಬದುಕಬಲ್ಲರು ಎಂದಿತ್ತು.