ಚಿತ್ರದುರ್ಗ: ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ಗೆ (Gulihatti Shekar) ಕ್ಷೇತ್ರದ ಮತದಾರರು ದೇಣಿಗೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಾಡದಕೆರೆ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಯ ಪೂಜೆ ಕಾರ್ಯಕ್ರಮದ ವೇಳೆ ಸ್ಥಳಕ್ಕೆ ಆಗಮಿಸಿದ್ದ ಕೂಲಿ ಕಾರ್ಮಿಕ ಮಹಿಳೆಯರು ಹಾಗೂ ಸ್ತ್ರೀ ಸಂಘಗಳ ಕೆಲ ಮಹಿಳೆಯರು ಶಾಸಕಗೂಳಿಹಟ್ಟಿ ಶೇಖರ್ ಚುನಾವಣೆ (Election) ಖರ್ಚಿಗಾಗಿ ಹಣ ಕೊಟ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಡ ಕೂಲಿ ಕಾರ್ಮಿಕರು ಹಾಗೂ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ದಿಢೀರ್ ಅಂತ ಹಣ ನೀಡಲು ಬಂದಾಗ ಕ್ಷಣಕಾಲ ಶಾಸಕ ಶೇಖರ್ ಮುಜುಗರಕ್ಕೊಳಗಾದರು. ಈ ವೇಳೆ ಮಾಡದಕೆರೆ ಹೋಬಳಿಯ ಬಿಜೆಪಿ (BJP) ಮುಖಂಡರು ಹಾಗೂ ಶಾಸಕರ ಬೆಂಬಲಿಗರು ಇದ್ದರು.
ಕಳೆದ 2018ರ ಚುನಾವಣೆಯಲ್ಲೂ ಸಹ ಹೊಸದುರ್ಗ ಕ್ಷೇತ್ರದಾದ್ಯಂತ ಶಾಸಕ ಶೇಖರ್ಗೆ ಜನರು ದೇಣಿಗೆ ನೀಡಿದ್ದರು. ಆದರೆ ಈ ಬಾರಿ ಚುನಾವಣೆಗೂ ಮುನ್ನವೇ ದೇಣಿಗೆ ನೀಡಿ, ಶಾಸಕರಿಗೆ ಶುಭ ಹಾರೈಸಿದ್ದಾರೆ.
ಈ ಬಾರಿ ಕ್ಷೇತ್ರದಲ್ಲಾಗಿರುವ ಏರುಪೇರು ಹಾಗೂ ಸ್ವಪಕ್ಷ ಬಿಜೆಪಿ ಸರ್ಕಾರದ ವಿರುದ್ಧವೇ ಟೆಂಡರ್ ವಿಚಾರದಲ್ಲಿ ಶಾಸಕ ಶೇಖರ್ ಗುಡುಗಿದ್ದನ್ನೆ ದಾಳವಾಗಿ ಬಳಸಿಕೊಂಡು ಅವರಿಗೆ ಟಿಕೆಟ್ ತಪ್ಪಿಸಲು ಕೆಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್ಗಾಗಿ ಮುಖಂಡರಾದ ಲಿಂಗಮೂರ್ತಿ ಹಾಗೂ ಶಾಸಕ ಶೇಖರ್ ಮಧ್ಯೆ ಬಾರಿ ಪೈಪೋಟಿ ಶುರುವಾಗಿದೆ.