ಚಿತ್ರದುರ್ಗ: ರಘು ಆಚಾರ್ ನಾಮ ಪತ್ರ ಸಲ್ಲಿಸುವ ವೇಳೆ ನಾನೂ ಕೂಡ ಭಾಗಿಯಾಗಿ ಚಿತ್ರದುರ್ಗದ ಜನತೆಗೆ ಮನವಿ ಮಾಡಿಕೊಳ್ಳಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಸವದತ್ತಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಚಿತ್ರದುರ್ಗದ ಕ್ಯಾದಿಗೆರೆ ಬಳಿ ಇರುವ ಜಿ.ರಘು ಆಚಾರ್ ನಿವಾಸಕ್ಕೆ ಭೇಟಿ ನೀಡಿದ್ದ ಹೆಚ್.ಡಿ ಕುಮಾರಸ್ವಾಮಿ, ರಘು ಆಚಾರ್ ಅವರ ಕುಟುಂಬದವರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾಮಪತ್ರಿಕೆ ಸಲ್ಲಿಕೆ ಕಾರ್ಯ ನಡೆಯುತ್ತಿದೆ, ರಘು ಆಚಾರ್ ಪಕ್ಷ ಸೇರ್ಪಡೆಯಿಂದಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಮೂರ್ನಾಲ್ಕು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಾತಾವರಣ ನಿರ್ಮಾಣ ಆಗಿದೆ.
ಹೊಳಲ್ಕೆರೆ ಕ್ಷೇತ್ರದಿಂದ ಇಂದ್ರಜಿತ್ ನಾಯ್ಕ್ ಅವರನ್ನು ನಿಲ್ಲಿಸಲು ಮಾತುಕತೆ ನಡೆಸಲಾಗಿದೆ, ಹಿರಿಯೂರು, ಹೊಸದುರ್ಗ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ, ಮೊಳಕಾಲ್ಮೂರು ಕ್ಷೇತ್ರದಲ್ಲಿ ಮಾತ್ರ ಸ್ವಲ್ಪ ಸಮಸ್ಯೆ ಇದೆ, ಈ ಬಗ್ಗೆ ರಘು ಆಚಾರ್, ಯತ್ನಟ್ಟಿ ಗೌಡ್ರು, ನಾನು ಎಲ್ಲಾ ಚರ್ಚೆ ಮಾಡಿದ್ದೇನೆ, ಸದ್ಯದಲ್ಲೇ ಆ ಕ್ಷೇತ್ರದ ಬಗ್ಗೆ ನಿರ್ಧಾರ ಪ್ರಕಟಿಸುತ್ತೇವೆ ಎಂದರು.
ಹಲವರು ಬೀಜೆಪಿ, ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದಾರೆ, ಚುನಾವಣಾ ಸಂದರ್ಭದಲ್ಲಿ ಇದೆಲ್ಲಾ ಸರ್ವೇ ಸಾಮಾನ್ಯ, ಆದರೆ ಅದರ ಸಾಧಕ ಬಾಧಕಗಳ ಬಗ್ಗೆ ಮುಂದೆ ಕಾದು ನೋಡಬೇಕು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಈ ವೇಳೆ ಆಶಾ ರಘು ಆಚಾರ್, ರಘು ಆಚಾರ್ ಸಹೋದರಿ ಗಾಯಿತ್ರಿ, ಭಾವ ಉಮೇಶ್ ಆಚಾರ್ ಹಾಕು ಕುಟುಂಬ ವರ್ಗದವರು ಹಾಜರಿದ್ದರು.
ವರದಿ : ಹನುಮಂತರಾಜು, ಚಳ್ಳಕೆರೆ