ನಾವು ಸಣ್ಣವರಾಗಿದ್ದಾಗ ಅಷ್ಟು ಚೆನ್ನಾಗಿ ಬೆಳ್ಳನೆ ಪಳಪಳನೆ ಹೊಳೆಯುತ್ತಿದ್ದ ಹಲ್ಲುಗಳು ನೋಡ ನೋಡುತ್ತಿದ್ದಂತೆ ಹಳದಿ ಬಣ್ಣಕ್ಕೆ ತಿರುಗಿ ನಮಗೂ ಬೇಜಾರು ಮಾಡಿ ಇತರರಿಗೂ ಬೇಸರವನ್ನು ತಂದಿಡುತ್ತವೆ. ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ಹಲ್ಲುಗಳ ಮೇಲಿರುವ ” ಎನಾಮೆಲ್ ” ಎಂಬ ಒಂದು ಬಿಳಿ ಪದರ. ಸಾಮಾನ್ಯವಾಗಿ ನಾವು ಯಾವ ವಸ್ತುವಿಗಾದರೂ ಬಣ್ಣ ಹಚ್ಚಿದರೆ ಅದು ದಿನಕಳೆದಂತೆ ಹೇಗೆ ಮಾಸುತ್ತದೋ ಅದೇ ರೀತಿ ನಿಸರ್ಗದತ್ತವಾಗಿ ನಮ್ಮ ಹಲ್ಲುಗಳು ಹುಟ್ಟುವಾಗ ಈ ಎನಾಮೆಲ್ ಎಂಬ ಬಿಳಿ ಬಣ್ಣದ ಪದರವನ್ನು ಹೊದ್ದುಕೊಂಡು ನಮ್ಮ ಬಾಯೊಳಗೆ ಮೂಡಿ ಬಂದಿರುತ್ತವೆ.
ನಮ್ಮ ಹಲ್ಲುಗಳ ಉಪಯೋಗ ದಿನದಿಂದ ದಿನಕ್ಕೆ ಜಾಸ್ತಿಯಾದಂತೆ ಈ ಪದರ ಇಲ್ಲವಾಗುತ್ತದೆ. ಆಗ ಇದರ ಕೆಳಗೆ ಇರುವ ಹಳದಿ ಬಣ್ಣದ ಪದರ ಗೋಚರಿಸುತ್ತದೆ. ಅದರಲ್ಲೂ ಕೆಲ ವಯಸ್ಸಾದ ಮಂದಿಗಂತೂ ಸಂಪೂರ್ಣವಾಗಿ ಎನಾಮೆಲ್ ಅಂಶ ಹಾಳಾಗಿ ಕಾಡು ಹಳದಿ ಬಣ್ಣಕ್ಕೆ ಹಲ್ಲುಗಳು ಮಾರ್ಪಾಡಾಗಿರುತ್ತವೆ. ನಮ್ಮ ಹಲ್ಲುಗಳನ್ನು ಮತ್ತೆ ವಾಪಾಸ್ ಬಿಳಿಬಣ್ಣಕ್ಕೆ ತಿರುಗಿಸಬೇಕಾದರೆ ನಾವು ಕೆಲವು ಕೃತಕ ವಿಧಾನಗಳ ಮೊರೆ ಹೋಗಬೇಕು.
ಹಲ್ಲುಗಳು ಬಿಳಿ ಬಣ್ಣದಿಂದ ಹಳದಿಯಾಗಲು ಯಾವ್ಯಾವ ಅಂಶಗಳು ಕಾರಣವಾಗುತ್ತವೆ?
ಬೆಳ್ಳಗೆ ಪಳಪಳನೆ ಹೊಳೆಯುತ್ತಿದ್ದ ನಿಮ್ಮ ಹಲ್ಲುಗಳು ಇದ್ದಕ್ಕಿದ್ದಂತೆ ಬಣ್ಣ ಬದಲಿಸಲು ಹಲವಾರು ಕಾರಣಗಳಿವೆ. ನೀವು ತಿನ್ನುವ ಆಹಾರ, ಬ್ಲೂಬೆರ್ರಿ ಹಣ್ಣುಗಳು, ಕುಡಿಯುವ ಪಾನೀಯಗಳು ಅಂದರೆ ಕಾಫಿ ಚಹಾ, ಹಣ್ಣಿನ ಜ್ಯೂಸ್, ಕೆಂಪುಬಣ್ಣದ ವೈನ್ ಇತ್ಯಾದಿಗಳು ಇದಕ್ಕೆ ಕಾರಣವಾಗಿರಬಹುದು.
ಇತರ ನಿರೀಕ್ಷಿಸಬಹುದಾದ ಕಾರಣಗಳೆಂದರೆ…
*ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಮತ್ತು ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ ಆಹಾರ.
*ಧೂಮಪಾನ ಅಥವಾ ತಂಬಾಕು ಸೇವನೆ
*ಕೆಲವು ಮೌತ್ ವಾಶ್ ಮತ್ತು ಔಷಧಿಗಳಿಂದ ಉಂಟಾಗುವ ಅಡ್ಡ ಪರಿಣಾಮಗಳು
*ವಯಸ್ಸು, ಹಿರಿಯ ವಯಸ್ಸಿನವರು ಸಾಮಾನ್ಯವಾಗಿ ಯುವಜನತೆ ಗಿಂತಲೂ ಹೆಚ್ಚಿನ ಪಾಲು ಹಳದಿ ಹಲ್ಲು ಉಳ್ಳವರಾಗಿರುತ್ತಾರೆ
*ಅನುವಂಶಿಯತೆ
*ಬಾಯಿ ಆಘಾತ
*ಫ್ಲೋರೈಡ್ ನ ಅತ್ಯಧಿಕ ಬಳಸುವಿಕೆ
*ಬಾಯಿಯ ಮತ್ತು ಹಲ್ಲು ಮತ್ತು ವಸಡಿನ ಆರೈಕೆಯಲ್ಲಿ ತೀವ್ರವಾದ ನಿರ್ಲಕ್ಷತೆ.
ಮೊದಲಿಗೆ ಹಲ್ಲುಗಳನ್ನು ಸರಿಯಾದ ರೀತಿಯಲ್ಲಿ ಉಜ್ಜುವ ಪ್ರಕ್ರಿಯೆ
ಹುಟ್ಟಿದಾಗಿನಿಂದಲೂ ಹಲ್ಲುಜ್ಜುತ್ತಿರುವ ನಮಗೆ ಈಗ ಈ ಸಲಹೆ ಅವಶ್ಯವೇ ಎಂಬ ಆಲೋಚನೆಯೇ. ಇಲ್ಲಿ ಕೇಳಿ. ಹಲ್ಲುಜ್ಜುವ ಬಗೆಯಲ್ಲೂ ಅನೇಕ ವಿಧಾನಗಳಿವೆ. ಆದರೆ ಸರಿಯಾದ ವಿಧಾನವನ್ನು ಆಯ್ದುಕೊಂಡರೆ ಮಾತ್ರ ನಿಮ್ಮ ಹಲ್ಲುಗಳು ಮತ್ತು ವಸಡುಗಳು ಯಾವುದೇ ರೋಗರುಜಿನ ಇಲ್ಲದೆ ಬಹಳ ಕಾಲ ಬಾಳಿಕೆ ಬರಬಲ್ಲದು. ಕೆಲವರು ಕೆಲಸದ ಒತ್ತಡದಿಂದಲೋ ಅಥವಾ ಇನ್ನಾವುದೇ ಅವಸರದ ಕಾರಣದಿಂದಲೋ ತಮ್ಮ ಹಲ್ಲುಗಳನ್ನು ಕಾಟಾಚಾರಕ್ಕೆ ಉಜ್ಜಿ ಬಾಯಿ ತೊಳೆದುಕೊಂಡು ತಮ್ಮ ಕೆಲಸ ತಾವು ನೋಡಿಕೊಳ್ಳುತ್ತಾರೆ. ಆದರೆ ದಂತ ವೈದ್ಯಕೀಯ ಮೂಲಗಳ ಪ್ರಕಾರ, ನಿಮ್ಮ ಹಲ್ಲುಗಳನ್ನು ಕನಿಷ್ಠವೆಂದರೂ ದಿನಕ್ಕೆ ಎರಡು ಬಾರಿ ಉಜ್ಜಬೇಕು. ಅಂದರೆ ನೀವು ಬೆಳಗ್ಗೆ ತಿಂಡಿ ತಿನ್ನುವ ಮೊದಲು ಹಲ್ಲುಜ್ಜುವುದು ಸಾಮಾನ್ಯ.
ಆದರೆ ತಿಂಡಿ ತಿಂದ ನಂತರ ಅಥವಾ ಕಾಫಿ-ಚಹಾ ಇಲ್ಲವೇ ಇನ್ನಾವುದೇ ಪಾನೀಯವನ್ನು ಸೇವಿಸಿದ ನಂತರ ಹಲ್ಲುಜ್ಜಿದರೆ ಉತ್ತಮ. ಇದೇ ಪ್ರಕ್ರಿಯೆಯನ್ನು ರಾತ್ರಿಯ ಊಟ ಮುಗಿದ ನಂತರ ಮಲಗುವ ಮುಂಚೆ ಮಾಡಿದರೆ ತುಂಬಾ ಒಳ್ಳೆಯದು. ಆದಷ್ಟು ನಿಮ್ಮ ಹಲ್ಲುಗಳನ್ನು ಅಡ್ಡಡ್ಡ ಉಜ್ಜುವ ಬದಲು ವೃತ್ತಾಕಾರವಾಗಿ ಉಜ್ಜುವುದನ್ನು ರೂಡಿ ಮಾಡಿಕೊಳ್ಳಿ. ಕಡಿಮೆಯೆಂದರೂ 2 ರಿಂದ 3 ನಿಮಿಷಗಳವರೆಗೆ ಹಲ್ಲುಜ್ಜುವುದನ್ನು ರೂಡಿ ಮಾಡಿಕೊಳ್ಳಿ. ಇದರಿಂದ ನಿಮ್ಮ ಹಲ್ಲುಗಳ ಸಂಧಿಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಆಹಾರದ ಉಳಿಕೆ ವಸ್ತುಗಳು ಸರಾಗವಾಗಿ ಹೊರಬರುತ್ತವೆ. ಹಲ್ಲುಜ್ಜುವುದು ಎಂದರೆ, ಕೇವಲ ಹಲ್ಲಿನ ಮೇಲೆ ಟೂತ್ ಬ್ರಷ್ ಆಡಿಸುವುದಲ್ಲ. ಹಲ್ಲುಗಳ ಹಿಂದೆ ಮತ್ತು ಆಹಾರವನ್ನು ಜಿಗಿಯಲು ಹಲ್ಲುಗಳ ಯಾವ ಭಾಗ ಉಪಯೋಗ ಬರುತ್ತದೆಯೋ ಅಲ್ಲೆಲ್ಲಾ ಟೂತ್ ಬ್ರಷ್ ನಿಂದ ಚೆನ್ನಾಗಿ ಉಜ್ಜಿ. ಈ ರೀತಿ ಹಲ್ಲುಜ್ಜುವ ಪ್ರಕ್ರಿಯೆಯನ್ನು ಮುಂದುವರಿಸಲು ನೀವು ಒಳ್ಳೆಯ ಫ್ಲೆಕ್ಸಿಬಲ್ ಟೂತ್ ಬ್ರಷ್ ಅನ್ನು ಖರೀದಿ ಮಾಡಿದ್ದರೆ ಉತ್ತಮ.
ಸ್ಟ್ರಾಬೆರಿ
ನಿಮ್ಮ ಹಲ್ಲುಗಳನ್ನು ಬಿಳುಪುಗೊಳಿಸಲು ಇದು ಅತ್ಯುತ್ತಮ. ಸ್ಟ್ರಾಬೆರಿಗಳು ಮಾಲಿಕ್ ಆಸಿಡ್ ಎಂಬ ಕಿಣ್ವವನ್ನು ಹೊಂದಿರುತ್ತವೆ. ಇದು ನಿಮ್ಮ ಹಲ್ಲುಗಳನ್ನು ಬಿಳಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಸೇಬು
ನಿಮ್ಮ ಬಾಯಿಯನ್ನು ಶುದ್ಧೀಕರಿಸುತ್ತದೆ ಮತ್ತು ನಿಮ್ಮ ಹಲ್ಲುಗಳ ನಡುವೆ ಸಿಲುಕಿರುವ ಆಹಾರ ಕಣಗಳನ್ನು ತೊಳೆಯುತ್ತದೆ. ಇದು ನಿಮ್ಮ ಒಸಡುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಬೇಕಿಂಗ್ ಸೋಡಾ ಮತ್ತು ಹೈಡ್ರೋಜನ್ ಪರಾಕ್ಸೈಡ್
ಈ ಮಿಶ್ರಣವನ್ನು ನೀವು ಮೌತ್ ವಾಷ್ ನ ರೀತಿಯಲ್ಲಿ ಕೂಡ ಉಪಯೋಗಿಸಬಹುದು. ಈ ಮಿಶ್ರಣವನ್ನು ತಯಾರು ಮಾಡಲು1 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ ತೆಗೆದುಕೊಳ್ಳಿ. ಅದಕ್ಕೆ 2 ಟೇಬಲ್ ಸ್ಪೂನ್ ನಷ್ಟು ಹೈಡ್ರೋಜನ್ ಪರಾಕ್ಸೈಡ್ ಅನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ನೀವು ನಿಮ್ಮ ಹಲ್ಲುಗಳನ್ನು ಟೂತ್ ಪೇಸ್ಟ್ ನ ಬದಲು ಈ ಪೇಸ್ಟ್ ನಿಂದ ಒಮ್ಮೆ ಉಜ್ಜಿ ನೋಡಿ. ನಂತರ ಶುದ್ಧವಾದ ನೀರಿನಿಂದ ಬಾಯಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.
ಕೋಕನಟ್ ಆಯಿಲ್ ಪುಲ್ಲಿಂಗ್
ಈ ವಿಧಾನದಲ್ಲಿ ನೀವು ಚಮಚದಷ್ಟು ಲಿಕ್ವಿಡ್ ಕೋಕನಟ್ ಆಯಿಲ್ ಅನ್ನು ನಿಮ್ಮ ಬಾಯಿಯಲ್ಲಿ ಹಾಕಿಕೊಂಡು ಸುಮಾರು 10 ರಿಂದ 30 ನಿಮಿಷಗಳ ಕಾಲ ಬಾಯೊಳಗೆ ಸುರುಳಿಯಾಕಾರದ ರೀತಿಯಲ್ಲಿ ಆಡಿಸಿ. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಈ ಎಣ್ಣೆ ನಿಮ್ಮ ಗಂಟಲನ್ನು ಮುಟ್ಟದ ಹಾಗೆ ನೋಡಿಕೊಳ್ಳಿ . ಅಷ್ಟೇ ಅಲ್ಲದೆ ಈ ಪ್ರಕ್ರಿಯೆ ಮುಗಿದ ಮೇಲೆ ಈ ಎಣ್ಣೆಯನ್ನು ಯಾವುದೇ ಕಾರಣಕ್ಕೂ ನಂಗಬೇಡಿ. ಏಕೆಂದರೆ ಇದರಲ್ಲಿ ಜೀವಾಣು ವಿಷ ಮತ್ತು ನಿಮ್ಮ ಬಾಯೊಳಗಿನ ಬ್ಯಾಕ್ಟೀರಿಯಾ ಗಳು ಸೇರಿರುತ್ತವೆ. ಇದನ್ನು ಆದಷ್ಟು ಟಾಯ್ಲೆಟ್ ನಲ್ಲಿ ಅಥವಾ ನೀವು ಕಸ ಹಾಕುವ ಬ್ಯಾಸ್ಕೆಟ್ ನಲ್ಲಿ ಉಗಿದು ಬಿಡಿ. ಏಕೆಂದರೆ ಇದು ಚರಂಡಿಗಳನ್ನು ಮುಚ್ಚುತ್ತದೆ. ನಂತರ ನಿಮ್ಮ ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಒಂದು ಲೋಟದ ತುಂಬಾ ನೀರು ಕುಡಿಯಿರಿ. ನಂತರ ಬ್ರಷ್ ನ ಸಹಾಯದಿಂದ ನಿಮ್ಮ ಹಲ್ಲುಜ್ಜಿಕೊಳ್ಳಿ.
ಆಪಲ್ ಸೈಡರ್ ವಿನೆಗರ್
2 ಟೀ ಚಮಚ ದಷ್ಟು ಆಪಲ್ ಸೈಡರ್ ವಿನಿಗರ್ ಅನ್ನು 6 ಔನ್ಸ್ ಗಳಷ್ಟು ನೀರಿನಲ್ಲಿ ಬೆರೆಸಿ ಮೌತ್ ವಾಶ್ ಅನ್ನು ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಬಾಯಿಯಲ್ಲಿ ಹಾಕಿಕೊಂಡು ಸುಮಾರು 3೦ ಸೆಕೆಂಡುಗಳ ಕಾಲ ಚೆನ್ನಾಗಿ ಬಾಯಿ ಮುಕ್ಕಳಿಸಿ. ನಂತರ ಬಾಯನ್ನು ತೊಳೆದುಕೊಂಡು ನಿಮ್ಮ ಹಲ್ಲನ್ನು ಉಜ್ಜಿಕೊಳ್ಳಿ.
ನಿಂಬೆಹಣ್ಣು, ಕಿತ್ತಳೆ ಹಣ್ಣು ಮತ್ತು ಬಾಳೆಹಣ್ಣಿನ ಸಿಪ್ಪೆ
ಕೆಲವರು ಹೇಳುವ ಹಾಗೆ ನಿಂಬೆಹಣ್ಣು, ಕಿತ್ತಳೆ ಹಣ್ಣಿನ ತೊಳೆ ಮತ್ತು ಬಾಳೆಹಣ್ಣಿನ ಸಿಪ್ಪೆಯನ್ನು ಹಲ್ಲುಗಳ ಮೇಲೆ ಉಜ್ಜುವುದರಿಂದ, ಹಲ್ಲಿನ ಹಳದಿ ಬಣ್ಣ ಮಾಯವಾಗಿ ಶ್ವೇತ ವರ್ಣಕ್ಕೆ ತಿರುಗುತ್ತವೆಯಂತೆ. ಇದಕ್ಕೆ ಕಾರಣ ಡಿ – ಲಿಮೋನೈನ್ ಎಂಬ ಅಂಶ. ಇದು ಕೆಲವು ಹಣ್ಣಿನ ಸಿಪ್ಪೆಗಳಲ್ಲಿ ಅಡಕವಾಗಿರುತ್ತದೆ. ಇದು ಹಲ್ಲಿನ ಮೂಲ ಬಣ್ಣವನ್ನು ಮತ್ತೆ ತರುವಲ್ಲಿ ಯಶಸ್ವಿ ಯಾಗಿದೆ. ಈ ಹಣ್ಣುಗಳನ್ನು ಅಥವಾ ಬಾಳೆಹಣ್ಣಿನ ಸಿಪ್ಪೆಯನ್ನು ಸುಮಾರು ಎರಡು ನಿಮಿಷಗಳ ಕಾಲ ನಿಮ್ಮ ಹಲ್ಲುಗಳ ಮೇಲೆ ನಿಧಾನವಾಗಿ ಮಸಾಜ್ ಮಾಡಿ. ನಂತರ ನಿಮ್ಮ ಬಾಯಿಯನ್ನು ಸ್ವಚ್ಛವಾಗಿ ತೊಳೆದು ಕೊಂಡು ಬ್ರಷ್ ಮಾಡಿಕೊಳ್ಳಿ.