ಒತ್ತಡದ ಜೀವನಶೈಲಿ, ಕೆಟ್ಟ ಆಹಾರಪದ್ಧತಿಯಿಂದ ಇವತ್ತಿನ ದಿನಗಳಲ್ಲಿ ತೂಕ ಹೆಚ್ಚಳ ಅನ್ನೋದು ಎಲ್ಲರಲ್ಲೂ ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಅನೇಕರ ಪಾಲಿಗೆ ಕಷ್ಟಕರವಾಗುತ್ತಿದೆ. ಜಿಮ್, ಡಯೆಟ್, ಯೋಗ ಎಂದು ಏನೇನೂ ಮಾಡಿದರೂ ತೂಕ ಇಳಿಕೆಯಾಗುವುದಿಲ್ಲ. ಅಂಥವರಿಗೆಂದೇ ವೈಟ್ ಲಾಸ್ ಮಾಡ್ಕೊಳ್ಳೋಕೆ ಸರಿಯಾದ ಮಾರ್ಗ ಇಲ್ಲಿದೆ.
ನಿಮ್ಮ ಉಪಹಾರವನ್ನು ತಪ್ಪಿಸಬೇಡಿ
ಬಹುತೇಕರು ತಮ್ಮ ಆಹಾರವನ್ನು ಮಿತಿಗೊಳಿಸುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ಭಮ್ರೆಯಲ್ಲಿರುತ್ತಾರೆ. ಹಾಗಾಗಿಯೇ ತಮ್ಮ ಬೆಳಗಿನ ಉಪಹಾರವನ್ನು ಸ್ಕಿಪ್ ಮಾಡುತ್ತಾರೆ. ವಾಸ್ತವವಾಗಿ, ಹೀಗೆ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ.
ಇದರ ಪರಿಣಾಮ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀವು ಕಳೆದುಕೊಳ್ಳುತ್ತಿದ್ದೀರಿ ಎಂದೇ ಅರ್ಥ. ಹಾಗಾಗಿ ಬೆಳಗಿನ ಉಪಹಾರವನ್ನು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವನೆ ಮಾಡಿ.
ನಿಯಮಿತವಾಗಿ ಊಟ ಮಾಡಿ
ದಿನಕ್ಕೆ ೩ ಬಾರಿ ತಿನ್ನುವ ಬದಲಾಗಿ ೪ ಬಾರಿ ಆಹಾರವನ್ನು ಮಿತವಾಗಿ ಸೇವನೆ ಮಾಡಿ. ಆಹಾರದ ಸೇವನೆಯಿಂದ ಯಾವುದೇ ಕಾರಣಕ್ಕೂ ದೇಹದ ತೂಕ ಹೆಚ್ಚಾಗುವುದಿಲ್ಲ. ಆದರೆ ಏನು ತಿನ್ನುತ್ತೀರಿ? ಎಷ್ಟು ಪ್ರಮಾಣದಲ್ಲಿ ತಿನ್ನುತ್ತೀರಿ? ಎಷ್ಟು ಕ್ಯಾಲೋರಿಗಳ ಸೇವನೆ ಮಾಡುತ್ತೀರಿ ಎಂಬುದು ತುಂಬಾ ಮುಖ್ಯ.
ಹೆಚ್ಚೆಚ್ಚು ಕ್ಯಾಲೋರಿಗಳ ಸೇವನೆಯಿಂದ ದೇಹದ ತೂಕ ಅಪಾರ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಮುಖ್ಯವಾಗಿ ಸಕ್ಕರೆ, ಪಿಷ್ಟ ಆಹಾರ, ಎಣ್ಣೆಯಲ್ಲಿ ಕರಿದ ಆಹಾರಗಳಿಂದ ಸಂಪೂರ್ಣವಾಗಿ ದೂರದಲ್ಲಿರಿ.
ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡಿ
ನೀವು ಊಟ ಮಾಡುವ ಬದಲಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಒಳ್ಳೆಯದು. ಇದು ನಿಮ್ಮ ತೂಕ ಇಳಿಕೆಗೆ ಗಮನಾರ್ಹವಾಗಿ ಸಹಾಯ ಮಾಡುತ್ತದೆ. ಅಲ್ಲದೆ, ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕನಿಷ್ಟ ಕ್ಯಾಲೋರಿ ಮತ್ತು ಕೊಬ್ಬು ಇರುವುದರಿಂದ ನೀವು ಯಾವುದೇ ಸಂದೇಹವಿಲ್ಲದೆ, ಹಣ್ಣು ಮತ್ತು ತರಕಾರಿಗಳನ್ನು ನಿಮ್ಮ ಡಯಟ್ ಚಾರ್ಟ್ನಲ್ಲಿ ಸೇರಿಸಿ. ಇಂತಹ ಆಹಾರದಲ್ಲಿ ಅತಿ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತದೆ.
ಸಾಕಷ್ಟು ನೀರು ಕುಡಿಯಿರಿ
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ನೀರು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಹೆಚ್ಚಾಗಿ ನೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಿ, ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗಾಗಿ ಇದು ಪರೋಕ್ಷವಾಗಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನೀವು ಅಧಿಕ ನಾರಿಶಾಂಶವಿರುವ ಆಹಾರವನ್ನು ಸೇವನೆ ಮಾಡುವುದರಿಂದ ಇದು ದೀರ್ಘ ಕಾಲಿಕವಾಗಿ ಹೊಟ್ಟೆಯನ್ನು ತುಂಬಿಸುತ್ತದೆ. ಇದರ ಪರಿಣಾಮ ನಿಮ್ಮ ಹಸಿವಿನ ಕಡು ಬಯಕೆಯನ್ನು ನಿಯಂತ್ರಿಸುತ್ತದೆ.
ರಾತ್ರಿಯ ಊಟ ಬೇಗ ಮುಗಿಸಿ
ನೀವು ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಬಯಸುವವರಾಗಿದ್ದರೆ, ರಾತ್ರಿಯ ಊಟವನ್ನು ಬೇಗ ಮುಗಿಸಿ. ತೂಕ ಇಳಿಕೆ ಮಾಡಿಕೊಳ್ಳಲು ಇದು ಸುಲಭವಾದ ಉಪಾಯವಾಗಿದ್ದು, ಹೀಗೆ ಮಾಡುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಅಲ್ಲದೆ, ಅಲ್ಕೋಹಾಲ್ ಅನ್ನು ಮಿತಿಗೊಳಿಸಿ. ಇದು ನಿಮ್ಮ ದೇಹದ ತೂಕವನ್ನು ಹೆಚ್ಚಿಸುತ್ತದೆ. ಬೀದಿ ಬದಿಯ ಆಹಾರವನ್ನು ಕಡಿತಗೊಳಿಸಿ.