ಯಾದಗಿರಿ: ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ನೇಮಕ ಆದೇಶದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯನವರ ಹೆಸರಲ್ಲಿ ನಕಲಿ ಸಹಿ ಮಾಡಿದ ಪ್ರಕರಣ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಅಬ್ದುಲ್ ನಬಿ ಕಾಡ್ಲೂರ್ರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿ ಆದೇಶ ಹೊರಡಿಸಿರುವಂತೆ ನಕಲಿ ಆದೇಶ ಪ್ರತಿಯನ್ನ ಸೃಷ್ಟಿಸಿರುವ ಆರೋಪಿಗಳು ಅದನ್ನು ವೈರಲ್ ಮಾಡಿದ್ದಾರೆ. ಜನ ನಕಲಿ ಆದೇಶವನ್ನು ನಿಜ ಎಂದು ನಂಬಿದ್ದು, ಸಾಕಷ್ಟು ಗೊಂದಲಕ್ಕೆ ಸಹ ಎಡೆ ಮಾಡಿಕೊಟ್ಟಿದೆ.
ಇತ್ತೀಚೆಗಷ್ಟೇ ನಿಧನರಾದ ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕರನ್ನು ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಫೆ.25 ರಂದು ರಾಜಾ ವೆಂಕಟಪ್ಪ ನಾಯಕ ನಿಧನರಾದ ಮೇಲೆ ಉಗ್ರಾಣ ನಿಗಮದ ಅದ್ಯಕ್ಷ ಸ್ಥಾನ ತೆರುವಾಗಿತ್ತು. ಕೇವಲ ಮೂರು ದಿನದಲ್ಲಿ ತೆರವಾದ ಸ್ಥಾನಕ್ಕೆ ಅಬ್ದುಲ್ ನಬಿ ಕಾಡ್ಲೂರ್ ಅವರನ್ನ ನೇಮ ಮಾಡಿರುವ ನಕಲಿ ಆದೇಶದ ಪ್ರತಿ ಹೊರ ಬಂದಿದೆ.
ಈ ನಕಲಿ ಆದೇಶ ಪ್ರತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಹಿ ಹೋಲುವಂತೆ ನಕಲು ಮಾಡಿರುವುದು ಈಗ ಬಯಲಾಗಿದೆ. ಮಾ.1 ರಂದು ಉಗ್ರಾಣ ನಿಗಮ ಮಂಡಳಿಗೆ ನೇಮಕ ಮಾಡಿ ಆದೇಶ ಹೊರಡಿಸಿರುವ ನಕಲು ಪ್ರತಿ ವೈರಲ್ ಆಗಿದೆ. ಕಳೆದ 4-5 ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿರುವ ಸಿಎಂ ನಕಲು ಆದೇಶ ಪ್ರತಿ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.