ಬೆಂಗಳೂರು: ಕಾಂಗ್ರೆಸ್ ಎರಡನೇ ಪಟ್ಟಿ ಗೊಂದಲದ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಕಾಂಗ್ರೆಸ್ ನಾಯಕತ್ವ ಮುಂದಾಗಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರಿಗೆ ಎಚ್ಚರಿಕೆಯ ನೋಟಿಸ್ ನೀಡಲಾಗಿದೆ.
ರೆಹಮಾನ್ ಖಾನ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ನೀಡಿದ್ದು, ಪಕ್ಷದ ನಾಯಕರುಗಳ ಅಥವಾ ಪಕ್ಷ ಘೋಷಿಸಿರುವ ಅಭ್ಯರ್ಥಿಗಳ ವಿರುದ್ಧ ಪೋಸ್ಟ್ ಮಾಡುವುದಾಗಲಿ ಅಥವಾ ಕಮೆಂಟ್ ಮಾಡಿದರೆ ಕ್ರಮದ ಎಚ್ಚರಿಕೆಯನ್ನು ನೀಡಿದೆ.
ಕಾಂಗ್ರೆಸ್ ನೋಟಿಸ್ ನಲ್ಲಿ ಏನಿದೆ?
ಕರ್ನಾಟಕ ವಿಧಾನ ಸಭಾ ಚುನಾವಣೆ – 2023 ರ ಸಂಬಂಧಿಸಿದಂತೆ ಜಾಲತಾಣದಲ್ಲಿ (ಫೇಸುಕ್ ವಾಟ್ಸಾಪ್, ಇನ್ಸಾಗ್ರಾಂ, ಟ್ವಿಟರ್ ಮತ್ತು ಇನ್ನಿತರ ಮಾದ್ಯಮಗಳಲ್ಲಿ) ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಕಾಂಗ್ರೆಸ್ ಪಕ್ಷ, ಪಕ್ಷದ ನಾಯಕರುಗಳ ಅಥವಾ ಪಕ್ಷ ಘೋಷಿಸಿರುವ ಅಭ್ಯರ್ಥಿಗಳ ವಿರುದ್ಧ ಪೋಸ್ಟ್ ಮಾಡುವುದಾಗಲಿ ಅಥವಾ ಕಮೆಂಟ್ ಮಾಡುವುದನ್ನು ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯು ಗಂಭೀರವಾಗಿ ಪರಿಗಣಿಸಲಿದೆ. ಹಾಗೆ ಪೋಸ್ಟ್ ಮಾಡಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ನೋಟಿಸ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 124 ಜನರ ಹೆಸರು ಘೋಷಣೆ ಮಾಡಲಾಗಿದೆ. ಆದರೆ ಇದೀಗ ಎರಡನೇ ಪಟ್ಟಿ ಸಾಕಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. 38 ಕ್ಷೇತ್ರಗಳಲ್ಲಿ ಟಿಕೆಟ್ ಪೈಪೋಟಿ ತೀವ್ರಗೊಂಡಿದೆ. ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಟಿಕೆಟ್ ಘೋಷಣೆ ಬಳಿಕ ಈ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಶಿಸ್ತು ಸಮಿತಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನೋಟಿಸ್ ನೀಡಿದೆ.
ಸ್ಥಳೀಯರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಆಗ್ರಹ
ದಶಕಗಳಿಂದ ಕಾಂಗ್ರೆಸ್ಪಕ್ಷದ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದ ಸ್ಥಳೀಯ ಕಾಂಗ್ರೆಸಿಗರಿಗೆ ತೇರದಾಳ ಮತಕ್ಷೇತ್ರದ ಟಿಕೆಟ್ನೀಡಬೇಕೆಂದು ಬಾಗಲಕೋಟೆಯ ಕಾಲತಿಪ್ಪಿ ಗ್ರಾಮದ ಮುಖಂಡ ಸಂಜು ರೆಡ್ಡಿ ಕಾಂಗ್ರೆಸ್ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದಾರೆ.