ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯದಲ್ಲಿ ಗೆಲುವಿಗೆ 148 ರನ್ಗಳ ಸುಲಭದ ಗುರಿ ಬೆನ್ನತ್ತಿದ್ದ ಆರ್ಸಿಬಿ ತಂಡ ಸ್ಪೋಟಕ ಆರಂಭ ಪಡೆದಿತ್ತು. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಮಾಜಿ ನಾಯ ವಿರಾಟ್ ಕೊಹ್ಲಿ ಮೊದಲ ವಿಕೆಟ್ಗೆ 35 ಎಸೆತಗಳಲ್ಲಿ 92 ರನ್ಗಳ ಜೊತೆಯಾಟ ಕಟ್ಟಿದ್ದಾಗ ಆರ್ಸಿಬಿ 10 ಓವರ್ಗಳ ಒಳಗೇ ಪಂದ್ಯ ಗೆದ್ದುಕೊಳ್ಳುತ್ತದೆ ಎಂಬುದು ಅಭಿಮಾನಿಗಳ ನಿರೀಕ್ಷೆ ಆಗಿತ್ತು.
ಆದರೆ, ನೋಡ ನೋಡುತ್ತಿದ್ದಂತೆಯೇ ಆರ್ಸಿಬಿ ಬ್ಯಾಟರ್ಗಳ ಪೆವಿಲಿಯನ್ ಪರೇಡ್ ಶುರುವಾಯಿತು. ಆದಷ್ಟು ಬೇಗ ಜಯ ತಂದುಕೊಡಬೇಕೆಂಬ ಆತುರದಲ್ಲಿ ಫಾಫ್ (64) ಮತ್ತು ವಿರಾಟ್ ಕೊಹ್ಲಿ (42) ವಿಕೆಟ್ ಕೈಚೆಲ್ಲಿದರು. ನಂತರ ಬಂದ ವಿಲ್ ಜಾಕ್ಸ್ (1), ರಜತ್ ಪಾಟಿದಾರ್ (2), ಗ್ಲೆನ್ ಮ್ಯಾಕ್ಸ್ವೆಲ್ (4) ಮತ್ತು ಕ್ಯಾಮೆರಾನ್ ಗ್ರೀನ್ (2) ಅಂತಹ ಘಾಟನುಘಟಿ ಬ್ಯಾಟರ್ಗಳು ಬೇಜವಾಬ್ದಾರಿಯುತವಾಗಿ ವಿಕೆಟ್ ಒಪ್ಪಿಸಿದಾಗ ಆರ್ಸಿಬಿ ಡ್ರೆಸಿಂಗ್ ರೂಮ್ನಲ್ಲಿ ಒತ್ತಡ ಮನೆ ಮಾಡಿತ್ತು.
ಈ ಹಂತದಲ್ಲಿ ಕಣಕ್ಕಿಳಿದ ಆರ್ಸಿಬಿ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ 12 ಎಸೆತಗಳಲ್ಲಿ 3 ಫೋರ್ಗಳೊಂದಿಗೆ ಅಜೇಯ 21 ರನ್ ಬಾರಿಸಿ ತಂಡವನ್ನು ಜಯದ ದಡ ಮುಟ್ಟಿಸುವ ಮೂಲಕ ಆರ್ಸಿಬಿ ಅಭಿಮಾನಿಗ ಮನದಲ್ಲಿ ಮೂಡಿದ್ದ ಆತಂಕವನ್ನು ಹೋಗಲಾಡಿಸಿದರು. ಪಂದ್ಯದ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್, ಗುಜರಾತ್ ಟೈಟನ್ಸ್ ಎದುರು ತಮಗೆ ಬ್ಯಾಟ್ ಮಾಡುವ ಆಸಕ್ತಿಯೇ ಇರಲಿಲ್ಲ ಎಂದು ಹೇಳಿದ್ದಾರೆ.