ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಭಾರತ-ನ್ಯೂಜಿಲೆಂಡ್ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ಮಾಜಿ ಕ್ಯಾಪ್ಟನ್ ಧೋನಿ (M.S.Dhoni) ಬರುತ್ತಾರೆಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಮಾಹಿ ಅನುಪಸ್ಥಿತಿ ಅಭಿಮಾನಿಗಳ ಊಹೆಯನ್ನು ಸುಳ್ಳಾಗಿಸಿದೆ. ಇತ್ತ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದ್ದರೆ, ಅತ್ತ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಪತ್ನಿಯೊಂದಿಗೆ ತಮ್ಮ ಪೂರ್ವಜರ ಮನೆಯಲ್ಲಿ ಸಮಯ ಕಳೆದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬುಧವಾರ, ಭಾರತವು ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯ ಆಡಿದ್ದ ವೇಳೆ, ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎಂ.ಎಸ್.ಧೋನಿಯನ್ನು ನೋಡುವ ಉತ್ಸುಕದಲ್ಲಿದ್ದರು. ಆದರೆ, ನೆಚ್ಚಿನ ಪ್ರೀತಿಯ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಗಳಿಸಿದ್ದ ಧೋನಿ ತನ್ನ ಪತ್ನಿಯೊಂದಿಗೆ ಉತ್ತರಾಖಂಡದ ತನ್ನ ಪೂರ್ವಜರ ಹಳ್ಳಿಗೆ ಹೋಗಿದ್ದರು.
ಧೋನಿ ಪತ್ನಿ ಸಾಕ್ಷಿ ಸಿಂಗ್ ಅವರು, ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿರುವ ಸುಂದರವಾದ ಲ್ವಾಲಿ ಗ್ರಾಮದಲ್ಲಿ ಇಬ್ಬರೂ ಪೋಸ್ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ”ಧೋನಿ ಅವರೊಂದಿಗೆ ಈವೆಂಟ್ಫುಲ್ ಡೇ! ಇಲ್ಲಿ ಅನೇಕರಿದ್ದಾರೆ ನನ್ನನ್ನು ನಂಬಿರಿ” ಎಂದು ಅವರು ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ. ಮೊದಲ ಚಿತ್ರದಲ್ಲಿ, ದಂಪತಿ ಲ್ವಾಲಿಯಲ್ಲಿ ವರ್ಣರಂಜಿತ ಮನೆಯ ಹೊಸ್ತಿಲಲ್ಲಿ ಕುಳಿತಿದ್ದಾರೆ. ಸಾಕ್ಷಿ ಅವರು ಮನೆಯನ್ನು ತೋರಿಸುವ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
ನವೆಂಬರ್ 15 ರಂದು ಇನ್ಸ್ಟಾಗ್ರಾಮ್ನಲ್ಲಿ ಸಾಕ್ಷಿಯವರು ಈ ಪೋಸ್ಟ್ ಹಾಕಿದ್ದಾರೆ. ಪೋಸ್ಟ್ಗೆ 11 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ಸಾವಿರಾರು ಕಾಮೆಂಟ್ಗಳು ಬಂದಿವೆ. ಪೋಸ್ಟ್ ಹಾಕಿ ಧೋನಿಯನ್ನು ತೋರಿಸಿದ್ದಕ್ಕೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ಧೋನಿ ಪತ್ನಿ ಸಾಕ್ಷಿಗೆ ಅನೇಕ ಅಭಿಮಾನಿಗಳು ಧನ್ಯವಾದ ತಿಳಿಸಿದ್ದಾರೆ. ಉತ್ತರಾಖಂಡದ ಜನತೆಗೆ ಧೋನಿ ದಂಪತಿಗೆ ಸ್ವಾಗತ ಕೋರಿದ್ದಾರೆ.