ಮಂಗಳೂರು: ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಒಳಹರಿವು ಒಂದೇ ಸವನೆ ಕಡಿಮೆಯಾಗಿದ್ದು, ಏಪ್ರಿಲ್ ತಿಂಗಳಾಂತ್ಯದೊಳಗೆ ಬೇಸಿಗೆ ಮಳೆ ಬಾರದಿದ್ದರೆ ನಗರದಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ. ಪ್ರಸ್ತುತ ಡ್ಯಾಂನಲ್ಲಿ ಶೇಖರಣೆಯಾಗಿರುವ ನೀರು 50ರಿಂದ 55 ದಿನಕ್ಕಷ್ಟೇ ಪೂರೈಕೆಯಾಗಬಹುದಾಗಿದೆ
ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಶುಕ್ರವಾರ ಸಂಜೆಯ ವೇಳೆಗೆ ನೀರಿನ ಮಟ್ಟ 5.85 ಮೀಟರ್ ಗೆ ಇಳಿಕೆಯಾಗಿದೆ. ಮಹಾನಗರಪಾಲಿಕೆ ಆಡಳಿತ ಮತ್ತು ನಗರದ ಜನತೆ ಈಗಲೇ ಮುಂದಾಲೋಚನೆ ಮಾಡದಿದ್ದರೆ 2019ರಲ್ಲಿ ಆದ ನೀರಿನ ಸಮಸ್ಯೆ ಈ ಬಾರಿಯೂ ನಗರವನ್ನು ಬಿಗಡಾಯಿಸಲಿದೆ.
4 ವರ್ಷದಲ್ಲೇ ಇಳಿಕೆ:
ತುಂಬೆ ವೆಂಟೆಡ್ ಡ್ಯಾಂನಲ್ಲಿ ಶೇಖರಣೆಯಾಗುತ್ತಿರುವ ನೀರಿನ ಪ್ರಮಾಣ ಹೋಲಿಕೆ ಮಾಡಿದರೆ 4 ವರ್ಷದಲ್ಲೇ ಅತ್ಯಧಿಕ ಇಳಿಕೆಯಾಗಿದೆ. 2020ರ ಮಾ.3ರಂದು 6 ಮೀಟರ್ ನೀರಿದ್ದರೆ, ಆ ಬಳಿಕ ಪ್ರತಿವರ್ಷ ಈ ದಿನಕ್ಕೆ 6 ಮೀಟರ್ ನೀರಿತ್ತು. ಈ ಬಾರಿ ಮಾ.3ಕ್ಕೆ 5.85 ಮೀಟರ್ಗೆ ಇಳಿಕೆಯಾಗಿದ್ದು ಇದು 4 ವರ್ಷದಲ್ಲೇ ಅತೀ ಕಡಿಮೆಯಾಗಿದೆ. 2019ರ ನೀರಿನ ಬಳಕೆಯನ್ನು ಹೋಲಿಸಿದರೆ ಈ ವರ್ಷಕ್ಕೆ ಶೇ.12ರಷ್ಟು ನೀರಿನ ಬೇಡಿಕೆ ಹೆಚ್ಚಳವಾಗಿದೆ. ಇದರಿಂದ ಈ ಬಾರಿ ಮತ್ತಷ್ಟು ಬೇಗ ನೀರಿನ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಅಧಿಕಾರಿಗಳು.
ಕಾಮಗಾರಿ, ಕೈಗಾರಿಕೆಗೆ ಇಲ್ಲ:
ತುಂಬೆ ವೆಂಟೆಡ್ ಡ್ಯಾಂಗೆ ಒಳಹರಿವು ಕಡಿಮೆಯಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಹೊಸ ಕೈಗಾರಿಕೆ, ಕಟ್ಟಡ ಕಾಮಗಾರಿಗಳಿಗೆ ಹೊಸ ನೀರಿನ ಸಂಪರ್ಕ ನಿಲ್ಲಿಸಲಾಗಿದೆ. ಈಗ ಇರುವ ಕೈಗಾರಿಕೆಗಳಿಗೆ ರೇಷನಿಂಗ್ ಮಾಡಲು ಸೂಚನೆ ನೀಡಲಾಗಿದೆ.
ಎಎಂಆರ್ ನೀರು ಆಶ್ರಯ:
ಎಎಂಆರ್ನಲ್ಲಿ ಪ್ರಸ್ತುತ 18.9(ಸಮುದ್ರ ಮಟ್ಟಕ್ಕಿಂತ ಮೇಲೆ) ಮೀ. ನೀರು ಇದ್ದು, ಇದರಲ್ಲಿ 14.5 ಮೀ. ಮಂಗಳೂರು ನಗರಕ್ಕೆ ಬಳಸಬಹುದು. ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ, ಅನಿವಾರ್ಯವಾದರೆ ಮಾತ್ರ ಎಎಂಆರ್ ಡ್ಯಾಂನ ನೀರು ಬಳಕೆ ಮಾಡಲು ನಿರ್ಧರಿಸಲಾಗಿದೆ.
ಕೈಗಾರಿಕೆಗಳಿಗೆ ನೀರಿನ ಪ್ರಮಾಣ
ಪ್ರಸ್ತುತ ಒಟ್ಟು 18 ಎಂಜಿಡಿ ನೀರು ಕೈಗಾರಿಕೆಗಳಿಗೆ ರವಾನೆಯಾಗುತ್ತಿದೆ. ತುಂಬೆ ಡ್ಯಾಂನಿಂದ ಎಂಸಿಎಫ್ಗೆ 2 ಎಂಜಿಡಿ, ಎನ್ಎಂಪಿಟಿಎ 0.5 ಎಜಿಡಿ, ಇತರ ಕೈಗಾರಿಕೆಗಳಿಗೆ 1 ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ಎಎಂಆರ್ನಿಂದ ಎಂಆರ್ಪಿಎಲ್ಗೆ 6 ಎಂಜಿಡಿ ಹಾಗೂ ಎಸ್ಇಝೆಡ್ಗೆ 8 ಎಂಜಿಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದೆ ಅನಿವಾರ್ಯವಾದರೆ ಕೈಗಾರಿಕೆಗಳು, ಕಾಮಗಾರಿಗಳಿಗೆ ನೀರು ಸ್ಥಗಿತ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎನ್ನುತ್ತಾರೆ ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ.
ನಗರಕ್ಕೆ ರೇಷನಿಂಗ್ ಅನಿವಾರ್ಯ
ನೀರಿನ ಒಳಹರಿವು ನಿಂತಿದ್ದು ನೀರಿನ ಬಳಕೆ ಆಧಾರ ಮತ್ತು ಮಳೆ ಬಾರದಿದ್ದರೆ ಈ ತಿಂಗಳಾಂತ್ಯದೊಳಗೆ ಮಂಗಳೂರು ನಗರದಲ್ಲಿ ರೇಷನಿಂಗ್ ಅನಿವಾರ್ಯವಾಗಲಿದೆ. ಈ ಬಗ್ಗೆ ಜನರು ಈಗಲೇ ಮುಂಜಾಗ್ರತೆ ವಹಿಸಬೇಕಾಗಿದೆ. ಕೈತೋಟ, ಕಟ್ಟಡ ಕಾಮಗಾರಿ, ವಾಹನಗಳನ್ನು ತೊಳೆಯಲು ನೀರಿನ ಬಳಕೆಯನ್ನು ಗಣನೀಯವಾಗಿ ಇಳಿಸಬೇಕು. ಮನೆ ಉಪಯೋಗಕ್ಕೂ ಸೀಮಿತ ಪ್ರಮಾಣದಲ್ಲಿ ಬಳಸಿದರೆ ಮಾತ್ರ ಸಮಸ್ಯೆ ನಿಯಂತ್ರಣಕ್ಕೆ ತರಲು ಸಾಧ್ಯ ಎಂದು ಮಂಗಳೂರು ಮಹಾನಗರಪಾಲಿಕೆ ಮೇಯರ್ ಜಯಾನಂದ್ ಅಂಚನ್ ಹೇಳಿದ್ದಾರೆ.
ಬಿರುಬಿಸಿಲು ಸೃಷ್ಟಿಸಿದೆ ಆತಂಕ
ಕೆಲವು ದಿನಗಳಿಂದೀಚೆಗೆ ಮಂಗಳೂರು ನಗರದಲ್ಲಿ ಬಿರುಬಿಸಿಲ ಬೇಗೆ ಮಿತಿ ಮೀರಿದೆ. ಮಂಗಳೂರಿನಲ್ಲಿ ಸಾಮಾನ್ಯವಾಗಿ 31-33 ಡಿಗ್ರಿ ಆಸುಪಾಸಿನಲ್ಲಿಸಬೇಕಾದ ಉಷ್ಣಾಂಶ 37 ಡಿಗ್ರಿ ದಾಖಲಾಗಿದೆ. ಇದೇ ರೀತಿ ಬಿಸಿಲಿನ ಬೇಗೆ ಹೆಚ್ಚಾದರೆ ನೀರಿನ ಆವಿ ಪ್ರಮಾಣವೂ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಇನ್ನೊಂದು ಮಾಹಿತಿ ಪ್ರಕಾರ ಇದೇ ರೀತಿ ಬೇಗೆ ಜಾಸ್ತಿಯಾದರೆ ಬೇಸಿಗೆ ಮಳೆಯ ಮುನ್ಸೂಚನೆ ಇರಬಹುದು ಎನ್ನುತ್ತಾರೆ ಪರಿಸರವಾದಿಗಳು.