ಹುಬ್ಬಳ್ಳಿ: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಬಂಜಾರ ಸಮಾಜದ ಕೆಲವು ಕಿಡಗೇಡಿಗಳ ಮೂಲಕ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾಂಗ್ರೆಸ್ ನಾಯಕರಿಗೆ ನೈತಿಕತೆಯೇ ಇಲ್ಲ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ಧರಾಮಯ್ಯನವರು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಗಂಡಸ್ಥನ ಇದ್ದರೆ ಮೀಸಲಾತಿ ಹೆಚ್ಚಳ ಮಾಡುವಂತೆ ಚಾಲೆಂಜ್ ಮಾಡಿದ್ದರು. ಈ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಮೊದಲಿಗೆ ಕೇವಲ ಆರು ಜಾತಿಗಳಿದ್ದವು ಆದರೆ ಈಗ ಸುಮಾರು 101 ಜಾತಿಗಳಿವೆ ಈ ಜಾತಿಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್ ಆದರೆ ಬಿಜೆಪಿ ಸರ್ಕಾರ ಅವರೆಲ್ಲರಿಗೂ ಅನ್ಯಾಯ ಮಾಡದಂತೆ ನ್ಯಾಯಯುತವಾಗಿ ಮೀಸಲಾತಿ ನೀಡಿದೆ ಎಂದರು.
ಮೀಸಲಾತಿಗೆ ಮೊದಲು ವಿರೋಧ ಕೇಳಿ ಬಂದಿತ್ತು. ಆದರೆ ಈ ಮೀಸಲಾತಿ ವಿಚಾರ ಮನವರಿಕೆಯಾದ ಬೆನ್ನಲ್ಲೇ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷ ಕೆಲ ಸಮುದಾಯವನ್ನು ಎತ್ತಿಕಟ್ಟಿ ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಅವರು ಹೇಳಿದರು.